ಮಡಿಕೇರಿ, ಸೆ. 17: ಕೊಡಗು ಜಿಲ್ಲೆಯಲ್ಲಿ ತೋಟ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ಆರೋಪಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ನೂತನ ಜಿಲ್ಲಾಧ್ಯಕ್ಷ ಸಂದೇಶ್ ಜೋಸೆಫ್ ಡಿಸೋಜ ಕಾರ್ಮಿಕ ಕಾಯ್ದೆ ಪ್ರಕಾರ ತೋಟ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ನೀಡದಿದ್ದಲ್ಲಿ ಕಾನೂನು ಹೋರಾಟ ನಡೆಸಿ ನ್ಯಾಯ ಒದಗಿಸಲು ಸಮಿತಿ ಕಾರ್ಯೋನ್ಮುಖವಾಗಿದೆ ಎಂದರು. ಜಿಲ್ಲೆಯ ತೋಟಗಳಲ್ಲಿ ಶ್ರಮದಿಂದ ದುಡಿಯುತ್ತಿರುವ ಕಾರ್ಮಿಕ ವರ್ಗಕ್ಕೆ ಯಾವದೇ ಭದ್ರತೆ ಇಲ್ಲದಾಗಿದೆ. ಮರಗಳ ಕಡಿತಲೆ ಸೇರಿದಂತೆ ಕೆಲವೊಂದು ಅಪಾಯಕಾರಿ ಕೆಲಸ ನಿರ್ವಹಣೆಯ ಸಂದರ್ಭ ಕಾರ್ಮಿಕರು ಸಾವನ್ನಪ್ಪಿರುವ ಘಟನೆಗಳೂ ನಡೆದಿವೆ. ಆದರೆ ಪ್ರಕರಣ ಮುಚ್ಚಿ ಹೋಗುತ್ತಿದ್ದು, ಅತ್ಯಲ್ಪ ಪ್ರಮಾಣದಲ್ಲಿ ಪರಿಹಾರದ ಹಣ ನೀಡುವ ಮೂಲಕ ಕಾರ್ಮಿಕ ಕುಟುಂಬವನ್ನು ವಂಚಿಸಲಾಗುತ್ತಿದೆ. ತೋಟ ಕೆಲಸ ನಿರ್ವಹಿಸುವಾಗ ಸುರಕ್ಷತೆಯ ದೃಷ್ಟಿಯಿಂದ ಕಾರ್ಮಿಕರಿಗೆ ಕೆಲವು ಸೌಲಭ್ಯಗಳನ್ನು ನೀಡಬೇಕೆನ್ನುವ ನಿಯಮವಿದ್ದು, ಇದನ್ನು ಮಾಲೀಕರು ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಕಾರ್ಮಿಕ ಅಧಿಕಾರಿಗಳಿಗೆ ಮಾಹಿತಿಯಿದ್ದರೂ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.
ಕಾಡಾನೆ ಧಾಳಿಗೆ ಸಿಲುಕಿ ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ. ಆದರೆ ಕೇವಲ 5 ಲಕ್ಷ ರೂ. ಪರಿಹಾರ ನೀಡಿ ಸುಮ್ಮನಾಗುತ್ತಿರುವ ಸರಕಾರ ಕಾರ್ಮಿಕರ ಜೀವ ಉಳಿಸುವದಕ್ಕಾಗಿ ಯಾವದೇ ಶಾಶ್ವತ ಪರಿಹಾರವನ್ನು ಸೂಚಿಸುತ್ತಿಲ್ಲ. ಈ ಬೆಳವಣಿಗೆ ಕೂಡ ದೌರ್ಜನ್ಯ ಮತ್ತು ನಿರ್ಲಕ್ಷ್ಯದ ಒಂದು ಭಾಗವಾಗಿದೆ ಎಂದು ಆರೋಪಿಸಿದ ಅವರು ಕಾವೇರಿ ನದಿ ನೀರಿಗಾಗಿ ಹೋರಾಡುತ್ತಿರುವ ರೈತರನ್ನು ಬಂಧಿಸುವ ಮೂಲಕ ರಾಜ್ಯ ಸರಕಾರ ಹೋರಾಟದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾವತಿ ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಾಗುತ್ತಿದ್ದು, ಅತ್ಯಾಚಾರ ಮತ್ತು ಹಿಂಸಾಚಾರದ ವಿರುದ್ಧ ಸಮಿತಿ ಧ್ವನಿ ಎತ್ತಲಿದೆ. ಇತ್ತೀಚೆಗೆ ಜಿಲ್ಲೆಯ ಕೆಲವು ಹೋಂ ಸ್ಟೇಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯ ನೆಪದಲ್ಲಿ ಮಹಿಳೆಯರನ್ನು ತೇಜೋವಧೆ ಮಾಡುವದನ್ನು ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಉಮೇಶ್ ಹಾಗೂ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಕೃಷ್ಣ ಹೆಚ್. ಹೈಲಾಪುರ ಉಪಸ್ಥಿತರಿದ್ದರು.