ಮಡಿಕೇರಿ, ಸೆ. 1: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ತಾ. 2 ರಂದು (ಇಂದು) ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು, ಜಿಲ್ಲೆಯಲ್ಲಿಯೂ ಕಾರ್ಮಿಕ ಸಂಘಟನೆಗಳು ಮುಷ್ಕರ ನಡೆಸಲಿವೆ. ಆದರೆ ಖಾಸಗಿ ಬಸ್ ಹಾಗೂ ಆಟೋಗಳು ಎಂದಿನಂತೆ ಸಂಚರಿ ಸಲಿವೆ. ಶಾಲಾ - ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಕಾರ್ಮಿಕರ ವಿವಿಧ ಬೇಡಿಕೆ ಗಳಾದ ಕನಿಷ್ಟ ವೇತನ 18,000 ನಿಗದಿ ಯಾಗಬೇಕು, ಕನಿಷ್ಟ ಪಿಂಚಣಿ, ಬೋನಸ್, ಭವಿಷ್ಯ ನಿಧಿ, ಉಪಧನ, ಕಾಯ್ದೆಗಳಲ್ಲಿನ ಮಿತಿಯನ್ನು ಹೆಚ್ಚಿಸ ಬೇಕು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆಗೆ ಸಮರ್ಪಕ ಹಣ ಮೀಸಲಿಡಬೇಕು, ಬೆಲೆ ನಿಯಂತ್ರಣಕ್ಕಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಜಾರಿ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಈ ಬಗ್ಗೆ ಆಸಕ್ತಿ ಹಾಗೂ ಕಾಳಜಿ ವಹಿಸಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಜಿಲ್ಲೆಯಲ್ಲಿ ಕೆಲವು ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದರೆ ಇನ್ನು ಕೆಲವು ಸಂಘಟನೆಗಳು ನೈತಿಕ ಬೆಂಬಲ ನೀಡಿವೆ.
ಬಸ್ - ಆಟೋ ಎಂದಿನಂತೆ ಸಂಚಾರ
ಜಿಲ್ಲಿಯಲ್ಲಿ ಖಾಸಗಿ ಬಸ್ ಕಾರ್ಮಿಕರ ಸಂಘ ಹಾಗೂ ಆಟೋ ಚಾಲಕರು ಹಾಗೂ ಮಾಲೀಕರ ಸಂಘ ಮುಷ್ಕರಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಎಂದಿನಂತೆ ವಾಹನಗಳು ಸಂಚರಿಸಲಿವೆ. ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಜಿಲ್ಲೆಯಲ್ಲಿ ಕೊಡಗಿನ ಪ್ರಮುಖ ಹಬ್ಬವಾದ ಕೈಲು ಮುಹೂರ್ತ ಹಬ್ಬವಿರುವ ಕಾರಣ ಖಾಸಗಿ ಬಸ್ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದ್ದು, ಬಸ್ ಕಾರ್ಮಿಕರ ಸಂಘವು ಮುಷ್ಕರಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಬಸ್‍ಗಳು ಎಂದಿನಂತೆ ಸಂಚರಿಸಲಿವೆ ಎಂದು ಖಾಸಗಿ ಬಸ್ ಮಾಲೀಕರುಗಳ ಸಂಘದ ಜಿಲ್ಲಾಧ್ಯಕ್ಷ ಹೊಸೂರ ರಮೇಶ್ ಜೋಯಪ್ಪ ತಿಳಿಸಿದ್ದಾರೆ.
ಜಿಲ್ಲಾ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್. ಮೇದಪ್ಪ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಮುಷ್ಕರಕ್ಕೆ ನೈತಿಕ ಬೆಂಬಲವಿದೆ. ಜಿಲ್ಲೆಯಲ್ಲಿ ಪ್ರಮುಖ ಹಬ್ಬವಿರುವದರಿಂದ ಆಟೋಗಳು ಎಂದಿನಂತೆ ಸಂಚರಿಸಲಿವೆ ಎಂದರು.
ವೀರಾಜಪೇಟೆ
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಕಾರ್ಮಿಕ ಸಂಘಟನೆಗಳು ಪಕ್ಷಬೇಧ ಮರೆತು ಪ್ರತಿಭಟಿಸುವ ಮೂಲಕ ದೇಶವ್ಯಾಪ್ತಿ ಸಾರ್ವತ್ರಿಕ ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದು ಎಲ್.ಐ.ಸಿ. ಟೌನ್ ಘಟಕದ ಅಧ್ಯಕ್ಷ ಎಂ.ಎನ್. ಅಚ್ಚಮ್ಮ ಹೇಳಿದರು. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಜಾಥಾ ನಡೆಸಿ ಬಳಿಕ ಕಾರು ನಿಲ್ದಾಣದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ ವಿಮಾರಂಗದಲ್ಲಿ ವಿದೇಶಿ ನೇರ ಬಂಡವಾಳ ಮಿತಿಯನ್ನು ಶೇ,49ಕ್ಕೆ ಹೆಚ್ಚಿಸುವ ಸುಗ್ರಿವಾಜ್ಞೆ ವಾಪಾಸ್ಸಾಗಬೇಕು ಎಂದರು.
ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಭರತ್ ಮಾತನಾಡಿ ಕಾರ್ಮಿಕರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಸಮರ್ಪಕವಾಗಿ ಜಾರಿ ಮಾಡಬೇಕು ಹಾಗೂ ದಿನ ನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಏರುತ್ತಿರುವದರಿಂದ ಕೇಂದ್ರ ಸರ್ಕಾರ ಯಾವದೆ ಕ್ರಮ ಕೈಗೊಳ್ಳುತ್ತಿಲ್ಲ ಕಾಡಾನೆ ಹಾವಳಿಯಿಂದ ಜನ ಭಯ ಬೀತರಾಗಿದ್ದಾರೆ ಸರಕಾರಗಳು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಸಿ.ಐ.ಟಿ.ಯು.ನ ಜಿಲ್ಲಾ ಕಾರ್ಯದರ್ಶಿ ರಮೇಶ್, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಸಮಿತಿಯ ಎ.ಸಿ.ಸಾಬು, ಕೆ.ಎಸ್.ರತೀಶ್, ಎಲ್.ಐ.ಸಿ.ಘಟಕದ ಶಿವಪ್ಪ, ಪ್ರಕಾಶ್ ಹಾಗೂ ಇತರ ಕಾರ್ಮಿಕ ಸಂಘಟನೆಗಳ ಮುಖಂಡರು ಗಳಿದ್ದರು.