ಮಡಿಕೇರಿ, ಸೆ. 26: ‘ಪತ್ರಿಕೆಯಲ್ಲಿ ವ್ಯಾಪಾರ ಮಳಿಗೆಗಳು ಬಂದ್, ಕುಟುಂಬಸ್ಥರು ಬೀದಿಪಾಲು’ ಎಂದು ಕೆಲವರು ಮಾಡಿರುವ ಆಪಾದನೆಗೆ ಗ್ರಾ.ಪಂ. ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
‘ಪಂಚಾಯಿತಿಯ ಹಿಂದಿನ ಆಡಳಿತ ಮಂಡಳಿಯವರು ಮಳಿಗೆಗಳನ್ನು ಪಡೆದುಕೊಂಡ ಬಾಡಿಗೆದಾರರು ಕಾನೂನು ಬಾಹಿರವಾಗಿ ಒಳಒಪ್ಪಂದ ಮಾಡಿ ಪಂಚಾಯಿತಿಗೆ ತುಂಬುವ ಬಾಡಿಗೆಗಿಂತ ನಾಲ್ಕು ಪಟ್ಟು ಹೆಚ್ಚು ಬಾಡಿಗೆಗೆ ನೀಡಿರುವದನ್ನು ಪರಿಗಣಿಸಿ ಮಳಿಗೆ ತೆರವುಗೊಳಿಸಲು ನಿರ್ಣಯ ಕೈಗೊಂಡು ಕ್ರಮ ಕೈಗೊಂಡಿದ್ದರು. ಆದರೆ ವಿವಿಧ ಚುನಾವಣೆಗಳು ಬಂದುದರಿಂದ ಮುಂದೂಡ ಲಾಯಿತು. ಪಂಚಾಯಿತಿಗೆ ಸೇರಿದ ವ್ಯಾಪಾರ ಮಳಿಗೆಗಳು ತುಂಬಾ ಅಪಾಯಕರ ಸ್ಥಿತಿಯಲ್ಲಿರುವದನ್ನು ಮನಗಂಡ ಆಡಳಿತ ಮಂಡಳಿಯವರು ಸಂಬಂಧಿಸಿದ ಲೋಕೋಪಯೋಗಿ ಅಧಿಕಾರಿಗಳಿಂದ ಕಟ್ಟಡದ ಸಾಮಥ್ರ್ಯದ ಬಗ್ಗೆ ಪರಿಶೀಲನೆ ನಡೆಸಿ ಅಭಿಪ್ರಾಯ ತಿಳಿಸಲು ಕೋರಿದ ಮೇರೆ, ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕಟ್ಟಡಗಳು ಉಪಯೋಗಕ್ಕೆ ಯೋಗ್ಯವಿಲ್ಲ ಎಂದು ದೃಢೀಕರಿಸಿದ್ದರು.
ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡು ಎಲ್ಲಾ ಮಳಿಗೆದಾರರನ್ನು ಕರೆಸಿ 2015ರ ಡಿಸೆಂಬರ್ ತಿಂಗಳಲ್ಲಿ ಮಳಿಗೆಗಳನ್ನು ಪಂಚಾಯಿತಿಗೆ ತುಂಬಬೇಕಾದ ಬಾಡಿಗೆ ಬಾಕಿಯನ್ನು ತುಂಬಿ ತೆರವು ಗೊಳಿಸಲು ಕೋರಿದಂತೆ ಎಲ್ಲಾ ಮಳಿಗೆದಾರರು ಒಪ್ಪಿಗೆ ಸೂಚಿಸಿದರೂ ಕೂಡ ಡಿಸೆಂಬರ್ ಅಂತ್ಯದಲ್ಲಿ ಮಳಿಗೆಗಳನ್ನು ಪಂಚಾಯಿತಿಗೆ ಬಿಟ್ಟು ಕೊಡದೆ ಪಂಚಾಯಿತಿಯ ತೀರ್ಮಾನವನ್ನು ನಿರ್ಲಕ್ಷಿಸಿ ಕಾನೂನು ಬಾಹಿರವಾಗಿ ಮುಂದುವರೆಯಲು ಪ್ರಯತ್ನ ಪಟ್ಟಿದ್ದರು. ಆದ್ದರಿಂದ ಕಾನೂನು ರೀತಿ ಪಂಚಾಯಿತಿ ವತಿಯಿಂದ ಬಾಡಿಗೆ ದಾರರನ್ನು ತೆರವುಗೊಳಿಸಲಾಯಿತು.
ಪ್ರಕಟಣೆಯಲ್ಲಿ ವಿವರಿಸಿದಂತೆ ಅನಾನುಕೂಲ ಯಾರಿಗೂ ಆಗಿರುವದಿಲ್ಲ. ಬೀದಿಗೂ ಬಂದಿರುವದಿಲ್ಲ. ಆದರೆ ಪಂಚಾಯಿತಿಯಿಂದ ಕಡಿಮೆ ಬಾಡಿಗೆಗೆ ಪಡೆದುಕೊಂಡ ಕೆಲವರು ಅದರ ನಾಲ್ಕುಪಟ್ಟು ಹೆಚ್ಚು ಬಾಡಿಗೆಗೆ ನೀಡಿದ ಸಮಾಜ ಸೇವಕರ ಕುಟುಂಬ ದವರು ಬೀದಿ ಪಾಲಾಗಿರಬಹುದಷ್ಟೆ. ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗೌರವಾನ್ವಿತ ಸಾರ್ವಜನಿಕರಿಗೆ ವ್ಯವಸ್ಥಿತವಾದ ಎಲ್ಲಾ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್ ಸರಬರಾಜು, ಕುಡಿಯುವ ನೀರು, ಕಸದ ವಿಲೇವಾರಿ ಹಾಗೂ ಚರಂಡಿ ವ್ಯವಸ್ಥೆಗೆ ಆದ್ಯತೆ ನೀಡಿ ಅನುದಾನದ ಸಮರ್ಪಕ ಬಳಕೆ ಮಾಡಲು ಬದ್ಧರಾಗಿರುತ್ತೇವೆ ಹಾಗೂ ಎಲ್ಲಾ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಅಭಿವೃದ್ಧಿ ದೃಷ್ಟಿಯಿಂದ ಸ್ವೀಕರಿಸುತ್ತೇವೆ’