ಸೋಮವಾರಪೇಟೆ, ಜು. 26: ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಗಳಿಸಿದ 17 ನೇ ವರ್ಷದ ವಿಜಯೋತ್ಸವವನ್ನು ಸೋಮವಾರ ಪೇಟೆಯ ವಿವಿಧ ಸಂಘ ಸಂಸ್ಥೆಗಳು ಸಂಭ್ರಮದಿಂದ ಆಚರಿಸಿದವು. ನಗರದಲ್ಲಿ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿದರೆ, ಯುದ್ಧದಲ್ಲಿ ಮಡಿದ ಯೋಧರ ಆತ್ಮಗಳಿಗೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಿದರು.
ಇಲ್ಲಿನ ಜೈ ಜವಾನ್ ಮಾಜೀ ಸೈನಿಕರ ಸಂಘದ ಸದಸ್ಯರು ಶಿಸ್ತುಬದ್ಧವಾದ ಕಾರ್ಯಕ್ರಮ ಸಂಘಟಿಸಿದ್ದರು. ಸಂಘದ ಸದಸ್ಯರು ಸಮವಸ್ತ್ರಧರಿಸಿ ಬಸವೇಶ್ವರ ಪ್ರತಿಮೆ ಬಳಿಯಿಂದ ನಗರದಲ್ಲಿ ಶಿಸ್ತಿನ ಮೆರವಣಿಗೆ ನಡೆಸಿದರು. ಭಾರತೀಯ ಸೈನ್ಯದ ಬಗ್ಗೆ ಜಯಘೋಷಗಳನ್ನು ಮೊಳಗಿಸಿದರು. ಮೆರವಣಿಗೆಯಲ್ಲಿ ಮಾಜಿ ಸೈನಿಕರೊಂದಿಗೆ ವೀರಕನ್ನಡಿ ಗರ ಸೇನೆಯ ಪದಾಧಿಕಾರಿಗಳು, ಭಾರತೀಯ ಜನತಾ ಪಕ್ಷದ ಮುಖಂಡರು, ಶಿವಾಜಿ ಸೇನೆಯ ಸದಸ್ಯರುಗಳು, ಆಟೋ ಚಾಲಕರ ಸಂಘದ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಬಸವೇಶ್ವರ ಪ್ರತಿಮೆ ಬಳಿ ಮೆರವಣಿಗೆಗೆ ಚಾಲನೆ ನೀಡಿದ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ದೇಶ ರಕ್ಷಣೆಯ ಕಾಯಕದಲ್ಲಿ ತೊಡಗಿರುವ ಸೈನಿಕರ ಶೌರ್ಯ ಸ್ಮರಣೆ ಸಾಮಾಜಿಕ ಜವಾಬ್ದಾರಿಯಾಗಿದೆ. ದೇಶದ ಗಡಿ ಕಾಯುವ ಸೈನಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಾರ್ಗಿಲ್ ವಿಜಯೋತ್ಸವ ಇಡೀ ದೇಶಕ್ಕೆ ಸಂದ ಗೌರವ ಎಂದು ಬಣ್ಣಿಸಿದರು.
ಕಾರ್ಗಿಲ್ ವಿಜಯ್ ದಿವಸ್ ಆಚರಣೆಯನ್ನು ಮಾಜೀ ಸೈನಿಕರು ಮಾಡುತ್ತಿರುವದು ಶ್ಲಾಘನೀಯ. ಶಿಸ್ತಿಗೆ ಮತ್ತೊಂದು ಹೆಸರೇ ಭಾರತೀಯ ಸೈನ್ಯ. ಇಂತಹ ಸೈನ್ಯದಲ್ಲಿ ಕೆಲಸ ಮಾಡಿ ನಿವೃತ್ತರಾದವರು ನಂತರದ ದಿನಗಳಲ್ಲೀ ಶಿಸ್ತಿನ ಜೀವನ ನಡೆಸುತ್ತಿದ್ದಾರೆ. ಸೋಮವಾರಪೇಟೆಯ ಜೈ ಜವಾನ್ ಮಾಜೀ ಸೈನಿಕರ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ನೀಡಲು ಬದ್ಧನಿದ್ದೇನೆ ಎಂದರು.
ಮೆರವಣಿಗೆಯ ನಂತರ ಇಲ್ಲಿನ ಜೇಸೀ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಯಿತು. ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಗ್ರೇಡ್2 ತಹಶೀಲ್ದಾರ್ ನರಗುಂದ್, ಮಾಜೀ ಸೈನಿಕರೂ ಆಗಿರುವ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಮೋಟಾರ್ ಯೂನಿಯನ್ ಅಧ್ಯಕ್ಷ ಸಿ.ಸಿ. ನಂದ, ಆಟೋ ಯೂನಿಯನ್ ಅಧ್ಯಕ್ಷ ಮೋಹನ್, ಶಿವಾಜಿ ಸೇನೆಯ ಅಧ್ಯಕ್ಷ ಮಿಲನ್, ವೀರ ಕನ್ನಡಿಗರ ಸೇನೆಯ ಜಿಲ್ಲಾಧ್ಯಕ್ಷ ದಿವಾಕರ್, ಜಿ.ಪಂ. ಮಾಜೀ ಅಧ್ಯಕ್ಷ ಶಿವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ಹಿಂದೂ ಜಾಗರಣಾ ವೇದಿಕೆ ವತಿಯಿಂದ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.
ಜಾಗರಣಾ ವೇದಿಕೆಯ ಮುಖಂಡರುಗಳಾದ ಸುಭಾಷ್ ತಿಮ್ಮಯ್ಯ, ದರ್ಶನ್, ಉಮೇಶ್, ರಮೇಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಮುಖರಾದ ಪದ್ಮನಾಭ್ ಸೇರಿದಂತೆ ಇತರರು ಭಾಗವಹಿಸಿದ್ದರು.