ಸೋಮವಾರಪೇಟೆ, ಡಿ. 15: ಆರ್‍ಎಸ್‍ಎಸ್ ತಾಲೂಕು ಕಾರ್ಯವಾಹ ಪದ್ಮನಾಭ ಅವರ ಕಾರನ್ನು ಪೆಟ್ರೋಲ್ ಬಾಂಬ್ ಎಸೆದು ಸುಟ್ಟು ಹಾಕಿರುವ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಯುವ ಮೋರ್ಚಾ, ಆರೋಪಿಗಳನ್ನು ತಕ್ಷಣ ಬಂಧಿಸದಿದ್ದರೆ ತಾ. 19ರಂದು ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮುಂದಿನ ಒಂದು ವಾರದಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ತಾ. 19 ರಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.

ಘಟನೆ ನಡೆದು ತಿಂಗಳಾದರೂ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ. ಭಯೋತ್ಪಾದಕರ ರೀತಿಯಲ್ಲಿಯೇ ಪೆಟ್ರೋಲ್ ಬಾಂಬ್ ಧಾಳಿ ನಡೆಸಿ ಕಾರನ್ನು ಸುಡಲಾಗಿದೆ. ತನಿಖೆಯನ್ನು ನಡೆಸಲು ಸ್ಥಳೀಯ ಪೊಲೀಸ್ ಇಲಾಖೆಗೆ ಸಾಧ್ಯವಾಗದ ಕಾರಣ, ರಾಷ್ಟ್ರೀಯ ತನಿಖಾ ದಳಕ್ಕೆ ಪ್ರಕರಣವನ್ನು ವಹಿಸಿ ಅವರಿಂದ ಸೂಕ್ತ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಬೆಂಗಳೂರು ಸರಣಿ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ತಡಿಯಂಡವೀಡು ನಜೀರ್ ಈ ಹಿಂದೆ ಹೊಸತೋಟದಲ್ಲಿದ್ದ ಸಂದರ್ಭ, ಈತನಿಂದ ತರಬೇತಿ ಪಡೆದಿರುವ ಭಯೋತ್ಪಾದಕರೇ ಇಂತಹ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಇದರೊಂದಿಗೆ ಜಿಲ್ಲೆಯಾದ್ಯಂತ ನಡೆದಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಹಲ್ಲೆ ಪ್ರಕರಣಗಳನ್ನೂ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಮಹೇಶ್ ಆಗ್ರಹಿಸಿದರು.

ಹಿಂದೂ ಸಮಾಜ ಜಿಲ್ಲೆಯಲ್ಲಿ ಶಾಂತಿಯಿಂದ ಇದೆ. ಇದನ್ನು ದೌರ್ಬಲ್ಯವೆಂದು ಭಾವಿಸುವದು ಬೇಡ. ಪೊಲೀಸ್ ವೈಫಲ್ಯವನ್ನು ಮುಚ್ಚಿಹಾಕಲು ಹಿಂದೂ ಸಂಘಟನೆಗಳ ಪ್ರತಿಭಟನೆಗಳನ್ನು ಹತ್ತಿಕ್ಕಲು ಇಲಾಖೆ ಮುಂದಾಗುತ್ತಿದೆ. ಜಿಲ್ಲೆಯಲ್ಲಿ ಕೇವಲ ಒಂದು ಕೋಮಿನವರಿಗೆ ಮಾತ್ರ ಪ್ರತಿಭಟನೆ ನಡೆಸಲು ಅನುವು ಮಾಡಿಕೊಡುವ ಪೊಲೀಸ್ ಇಲಾಖೆ, ಹಿಂದೂ ಸಂಘಟನೆಗಳು ಪ್ರತಿಭಟಿಸಲು ಮುಂದಾದರೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಕೊಡಗು ಜಿಲ್ಲೆಯಲ್ಲಿ ಕೆಲ ಅತೃಪ್ತ ಆತ್ಮಗಳು ಬುದ್ದಿಜೀವಿಗಳ ಹೆಸರಿನಲ್ಲಿ ಹಿಂದೂ ಸಮಾಜದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿವೆ. ಜಾತಿಗಳ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿವೆ. ಇದು ಫಲ ನೀಡುವದಿಲ್ಲ. ಅನೇಕ ಶತಮಾನಗಳಿಂದಲೂ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಆದರೆ ಇದಕ್ಕೆಲ್ಲಾ ಸಮಾಜ ಬಗ್ಗುವದಿಲ್ಲ. ಹಿಂದೂ ಸಮಾಜ ಇನ್ನಷ್ಟು ಬಲಿಷ್ಠವಾಗುತ್ತಿದೆ ಎಂದು ಮಹೇಶ್ ತಿಮ್ಮಯ್ಯ ಹೇಳಿದರು.

ಗೋಷ್ಠಿಯಲ್ಲಿ ಯುವ ಮೋರ್ಚಾದ ತಾಲೂಕು ಘಟಕದ ಉಪಾಧ್ಯಕ್ಷ ಪ್ರಸನ್ನ ನಾಯರ್, ಸಂಘಟನಾ ಕಾರ್ಯದರ್ಶಿ ಶಶಿಕಾಂತ್, ಖಜಾಂಚಿ ಪ್ರಜಾ ಪೂಣಚ್ಚ, ಉಮೇಶ್ ಉಪಸ್ಥಿತರಿದ್ದರು.