ಕುಶಾಲನಗರ, ಜು. 16: ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಆಸ್ಪತ್ರೆಗೆ ದಾಖಲಾದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಬೆಂಗಳೂರಿನಿಂದ ಮಡಿಕೇರಿಯತ್ತ ತೆರಳುತ್ತಿದ್ದ ಹೋಂಡಾ ಸಿಟಿ ಕಾರು (ಡಿಎಲ್.1.ಎನ್.8883) ಹಾಗೂ ಕುಶಾಲನಗರದತ್ತ ಆಗಮಿಸುತ್ತಿದ್ದ ಸರಕು ತುಂಬಿದ ಲಾರಿ (ಕೆಎ.19.ಎಬಿ.6166) ನಡುವೆ ಸ್ಥಳೀಯ ಸರಕಾರಿ ಇಂಜಿನಿಯರಿಂಗ್ ಕಾಲೇಜು ಬಳಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಗಳಾದ ಮಾಧವ್, ಸುಹಾಮ್, ಅದಿತಿ ಹಾಗೂ ಮಿಲೋನಿ ಎಂಬವರಿಗೆ ಗಾಯಗಳಾಗಿದ್ದು ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಈ ಪೈಕಿ ಮಾಧವ್ ಮತ್ತು ಸುಹಾಮ್ ಎಂಬವರ ಕಾಲು ಮೂಳೆ ಮುರಿತಕ್ಕೊಳಗಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಲಾರಿ ಚಾಲಕ ಅಬ್ದುಲ್ ಗಫೂರ್‍ನನ್ನು ವಶಕ್ಕೆ ಪಡೆದುಕೊಂಡಿದ್ದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.