ಸೋಮವಾರಪೇಟೆ, ಡಿ. 22: ಕಳೆದ ನವೆಂಬರ್ 13ರಂದು ಐಗೂರು ಗ್ರಾಮದ ಆರ್‍ಎಸ್‍ಎಸ್ ಮುಖಂಡ ಪದ್ಮನಾಭ್ ಅವರ ಕಾರಿಗೆ ಪೆಟ್ರೋಲ್ ಬಾಂಬ್ ಎಸೆದು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಓರ್ವನನ್ನು ಬಂಧಿಸಿದ್ದು, ಪ್ರಕರಣದ ಪ್ರಮುಖ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.ನಗರಕ್ಕೆ ಸಮೀಪದ ಕಲ್ಕಂದೂರು ಗ್ರಾಮ ನಿವಾಸಿ ದಿ.ಮೂಸ ಎಂಬವರ ಪುತ್ರ ಜಮಾಲುದ್ದೀನ್ ಅಲಿಯಾಸ್ ಜಮಾಲ್ (20) ಬಂಧಿತ ಆರೋಪಿಯಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಪಟ್ಟಣದ ಜನತಾ ಕಾಲೋನಿ ನಿವಾಸಿ ಕರೀಂ ಬೇಗ್ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಳೆದ ನವೆಂಬರ್ 13ರಂದು ಬೆಳಕಿಗೆ ಬಂದ ಐಗೂರು ಗ್ರಾಮದ ಮಸೀದಿಯಲ್ಲಿ ಕುರಾನ್ ಸುಟ್ಟ ಪ್ರಕರಣದ ನಂತರ ಅದೇ ದಿನ ರಾತ್ರಿ ಆರ್.ಎಸ್.ಎಸ್.ನ ಪ್ರಮುಖ ಹಾಗೂ ವಕೀಲ ಕೆ.ಎಸ್. ಪದ್ಮನಾಭರವರ ಕಾರಿಗೆ ಪೆಟ್ರೋಲ್ ಬಾಂಬ್ ಎಸೆದು ಧ್ವಂಸಗೊಳಿಸಿದ ಪ್ರಕರಣ ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

ಘಟನೆಯನ್ನು ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ಮಧ್ಯೆ ಇದೇ

ತಾ. 26ರಂದು ಸೋಮವಾರಪೇಟೆಯಲ್ಲಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ

(ಮೊದಲ ಪುಟದಿಂದ) ನಡೆಸಲು ತಯಾರಿ ನಡೆಸಿದ್ದವು. ಇತ್ತ ಪ್ರಕರಣವನ್ನು ಸವಾಲಾಗಿ ಪರಿಗಣಿಸಿದ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಹಗಲೂ ರಾತ್ರಿಯೆನ್ನದೆ ತನಿಖೆ ನಡೆಸುತ್ತಿದ್ದರು.

ಇದಕ್ಕೂ ಕುರಾನ್‍ಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಐಗೂರು ಗ್ರಾಮದ ಧರಣೇಶ್ ಎಂಬಾತನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದಾದ ನಂತರ ಹಿಂದೂ ಪರ ಸಂಘಟನೆಗಳು ಪದ್ಮನಾಭ್ ಅವರ ಕಾರಿಗೆ ಪೆಟ್ರೋಲ್ ಬಾಂಬ್ ಎಸೆದ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆ ಮೇಲೆ ತೀವ್ರ ಒತ್ತಡ ಹೇರುತ್ತಿದ್ದವು.

ಇದೆಲ್ಲದರಿಂದಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‍ಪೆಕ್ಟರ್ ಕರೀಂ ರಾವ್‍ತರ್ ಹಾಗೂ ಸೋಮವಾರಪೇಟೆ ಡಿವೈಎಸ್‍ಪಿ ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಸಬ್ ಇನ್ಸ್‍ಪೆಕ್ಟರ್ ಶಿವಣ್ಣ ಹಾಗೂ ಡಿಸಿಐಬಿ ಸೇರಿದಂತೆ ಇಲ್ಲಿನ ಪೊಲೀಸ್ ಠಾಣಾ ಸಿಬ್ಬಂದಿಗಳು ತಾ.21ರಂದು ಮಡಿಕೇರಿಯಲ್ಲಿ ಆರೋಪಿ ಜಮಾಲ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆಯ ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರಿಗೆ ಬೆಂಕಿ ಹಚ್ಚಿದ ಘಟನೆಯ ನಂತರ ಆರೋಪಿ ಜಮಾಲ್ ಮಡಿಕೇರಿಯ ವಕೀಲರೋರ್ವರ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದ್ದು, ಈತನ ಚಲನ ವಲನಗಳನ್ನು ಗಮನಿಸಿದ ತನಿಖಾ ತಂಡ ನಿನ್ನೆ ದಿನ ಮಡಿಕೇರಿಯಲ್ಲಿ ವಶಕ್ಕೆ ಪಡೆದಿದೆ.

ಆರೋಪಿ ಪರ ವಕಾಲತ್ತು ವಹಿಸದಂತೆ ವಕೀಲರ ಸಂಘ ನಿರ್ಧಾರ: ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪರ ವಕಾಲತ್ತು ವಹಿಸದಂತೆ ಇಲ್ಲಿನ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದಾರೆ.

ಕೊಡಗು ಸೇರಿದಂತೆ ಪಕ್ಕದ ಜಿಲ್ಲೆಗಳಾದ ಅರಕಲಗೂಡು, ಪಿರಿಯಾಪಟ್ಟಣ, ಹುಣಸೂರು ವಕೀಲರುಗಳು ಆರೋಪಿಗಳ ಪರ ವಕಾಲತ್ತು ವಹಿಸದಂತೆ ಅಲ್ಲಿನ ವಕೀಲರ ಸಂಘಕ್ಕೆ ಮನವಿ ಸಲ್ಲಿಸಲಾಗುವದೆಂದು ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಸಂದರ್ಭ ವಕೀಲರ ಸಂಘದ ಪದಾಧಿಕಾರಿಗಳಾದ ಮನೋಹರ್, ನವೀನ್, ಶಂಕರ್ ಸೇರಿದಂತೆ ಇತರರು ಹಾಜರಿದ್ದರು.

ಘಟನೆಯ ಹಿನ್ನೆಲೆ: ನ. 13ರ ಭಾನುವಾರ ಆರ್‍ಎಸ್‍ಎಸ್ ತಾಲೂಕು ಕಾರ್ಯವಾಹ ಹಾಗೂ ವಕೀಲ ಕೆ.ಎಸ್.ಪದ್ಮನಾಭ ಅವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ವ್ಯಾಗನರ್ ಕಾರು ಬೆಂಕಿಗಾಹುತಿಯಾಗಿತ್ತು. ಸಮೀಪದ ಮನೆಯಲ್ಲಿ ಅವರ ಸಹೋದರಿ ಅನುರಾಧ ಅವರಿಗೆ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ನಿದ್ದೆಯಿಂದ ಎಚ್ಚರಗೊಂಡು ಪದ್ಮನಾಭ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಇದೇ ಸಂದರ್ಭ ಕಿಟಕಿಯಿಂದ ಹೊರನೋಡಿದಾಗ ಕಾರಿನೊಳಗಿಂದ ಬೆಂಕಿ ಹೊಗೆ ಬರುತ್ತಿರುವದನ್ನು ಗಮನಿಸಿದ್ದಾರೆ. ಕೂಡಲೆ ಕಾರ್ಯಪ್ರವೃತ್ತರಾಗಿ ಪಕ್ಕದ ಮನೆಯವರ ಸಹಾಯದಿಂದ ಬೆಂಕಿ ನಂದಿಸಿ, ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು.

ಹಿಂದೂಪರ ಸಂಘಟನೆಗಳ ನಾಯಕರುಗಳನ್ನು ಕೇಂದ್ರಿಕರಿಸಿ ರಾಜ್ಯಾದಾದ್ಯಂತ ಇಂತಹ ಕೃತ್ಯಗಳನ್ನು ಎಸಗಲಾಗುತ್ತಿದೆ. ಟಿಪ್ಪು ಜಯಂತಿಗೆ ಸಂಬಂಧಪಟ್ಟಂತೆ ಹಿಂದೂಪರ ಸಂಘಟನೆಗಳ ಪ್ರಕರಣಗಳ ವಕಾಲತ್ತನ್ನು ನಾನು ವಹಿಸುತ್ತಿದ್ದು, ಈ ದ್ವೇಷದಿಂದ ಕೃತ್ಯವೆಸಗಿರಬಹುದು. ಕಾರಿನ ಒಳಭಾಗದಲ್ಲಿ ಎರಡು ಖಾಲಿ ಬಾಟಲಿ ಪತ್ತೆಯಾಗಿದ್ದು, ಪೆಟ್ರೋಲ್ ಬಾಂಬ್ ಆಗಿರಬಹುದು ಎಂದು ಆರ್‍ಎಸ್‍ಎಸ್ ಮುಖಂಡ ಹಾಗೂ ವಕೀಲ ಕೆ.ಎಸ್. ಪದ್ಮನಾಭ ಸಂಶಯ ವ್ಯಕ್ತ ಪಡಿಸಿ ಪೊಲೀಸ್ ದೂರು ನೀಡಿದ್ದರು.