ಸೋಮವಾರಪೇಟೆ,ಡಿ.5: ಕಳೆದ ನ. 13ರಂದು ಐಗೂರು ಗ್ರಾಮದ ಪದ್ಮನಾಭ್ ಅವರ ಕಾರಿಗೆ ಪೆಟ್ರೋಲ್ ಬಾಂಬ್ ಹಾಕಿ ಬೆಂಕಿ ಹಚ್ಚಿದ ಕಿಡಿಗೇಡಿಗಳ ಬಂಧನಕ್ಕೆ ಇದುವರೆಗೂ ಪೊಲೀಸ್ ಇಲಾಖೆ ಮುಂದಾಗದೇ ಇರುವ ಕ್ರಮವನ್ನು ಖಂಡಿಸಿ ತಾ. 11ರಂದು ಸೋಮವಾರಪೇಟೆಯ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸುವದಾಗಿ ಹಿಂದೂ ಮಲಯಾಳ ಸಂಘ ಎಚ್ಚರಿಕೆ ನೀಡಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಪಿ.ಡಿ. ಪ್ರಕಾಶ್, ಸೋಮವಾರಪೇಟೆ ಹಾಗೂ ಕುಶಾಲನಗರ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಮಾಡುತ್ತಿರುವ ನಮ್ಮ ಸಂಘದ ಸಲಹೆಗಾರರೂ ಆಗಿರುವ ಪದ್ಮನಾಭ್ ಅವರ ಕಾರಿಗೆ ಪೆಟ್ರೋಲ್ ಬಾಂಬ್ ಹಾಕಿದ ದುಷ್ಕರ್ಮಿಗಳ ಬಂಧನ ಇನ್ನೂ ಆಗಿಲ್ಲ. ತನಿಖೆ ಯಲ್ಲೂ ಯಾವದೇ ಪ್ರಗತಿ ಕಂಡು ಬಂದಿಲ್ಲ ಎಂದು ಆರೋಪಿಸಿದರು.

ಘಟನೆಯ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಆರೋಪಿಗಳ ಪತ್ತೆ ಆಗಿಲ್ಲ. ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ತಂತ್ರಗಳು ನಡೆಯುತ್ತಿರುವ ಸಂಶಯವಿದ್ದು, ಇಲಾಖೆಯ ವಿಳಂಬ ಧೋರಣೆಯನ್ನು ಖಂಡಿಸಿ ತಾ. 11ರಂದು ಪ್ರತಿಭಟನೆ ನಡೆಸುವದಾಗಿ ತಿಳಿಸಿದರು.

ಮುಂದಿನ ಒಂದು ವಾರದೊಳಗೆ ದುಷ್ಕರ್ಮಿಗಳನ್ನು ಬಂಧಿಸಬೇಕು. ನಷ್ಟಕ್ಕೊಳಗಾಗಿರುವ ಪದ್ಮನಾಭ್ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಹಿಂದೂ ಮಲಯಾಳ ಸಂಘಟನೆಯಿಂದ ಠಾಣೆಯ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ಪ್ರಕಾಶ್ ಹೇಳಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕ ಗಂಗಾಧರ್, ಸಲಹೆಗಾರರಾದ ವಿ.ಕೆ. ಲೋಕೇಶ್, ವಿ.ಎಂ. ವಿಜಯ, ಖಜಾಂಚಿ ರಾಜನ್ ಉಪಸ್ಥಿತರಿದ್ದರು.