ನಾಪೋಕ್ಲು, ಜ. 31 : ವ್ಯಾಪಕವಾಗಿ ಹರಡುತ್ತಿರುವ ಕಾಮಾಲೆ (ಜಾಂಡೀಸ್) ಕಾಯಿಲೆಯನ್ನು ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ಇಂದಿಲ್ಲಿ ಸ್ಪಷ್ಟ ನಿರ್ದೇಶನ ನೀಡಲಾಯಿತು.ನಾಪೋಕ್ಲು ವ್ಯಾಪ್ತಿಯಲ್ಲಿ ಜಾಂಡೀಸ್ ಕಾಯಿಲೆ ಉಲ್ಭಣಿಸಿರುವ ಹಿನ್ನೆಲೆಯಲ್ಲಿ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಸುಬ್ರಮಣಿ, ನಾಪೋಕ್ಲು ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರುಳಿಧರ್ ಕರುಂಬಮ್ಮಯ್ಯ ಅವರು ಇಲ್ಲಿನ ಹೊಟೇಲ್ ಮತ್ತು ರಸ್ತೆ ಬದಿ ತಿಂಡಿ ತಿನಿಸು ಮಾರಾಟ ಮಳಿಗೆ , ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಜಾಂಡೀಸ್ ಕಾಯಿಲೆಯ ಗುಣ ಲಕ್ಷಣದೊಂದಿಗೆ ನಾಪೋಕ್ಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 29 ರೋಗಿಗಳ ಪೈಕಿ 12 ಜನರಲ್ಲಿ ಕಾಮಾಲೆ ರೋಗವಿರುವದು ಕಂಡು ಬಂದಿದೆ ಎಂದು ಹರೀಶ್ ಮಾಹಿತಿ ನೀಡಿದರು.

ಅಶುದ್ಧ ನೀರು ಹಾಗೂ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿಂಡಿ ತಿನಿಸುಗಳಿಂದ ಈ ರೋಗ ಹರಡುತ್ತಿದ್ದು, ನಾಪೋಕ್ಲು ಪಟ್ಟಣಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಕ್ರಮಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ವಿತ್ತರಲ್ಲದೇ, ಹೊಟೇಲ್ ಮತ್ತು ರಸ್ತೆ ಬದಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡದಂತೆ ಸೂಚನೆಯಿತ್ತರು.

ಕೇವಲ ನಾಪೋಕ್ಲು ಪಟ್ಟಣಕ್ಕೆ ಮಾತ್ರ ಮುಂಜಾಗ್ರತಾ ಕ್ರಮ ಸೀಮಿತವಾಗಬಾರದು. ಜಿಲ್ಲೆಯ ಎಲ್ಲಾ ಶಾಲೆÀ, ಹೊಟೇಲ್Éಗಳಿಗೆ ಆರೋಗ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸುವದರೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು, ರೋಗದ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ನಿಯಂತ್ರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನಿರ್ದೇಶಿಸಿದರು.

ಈ ಸಂದರ್ಭ ಆರ್.ಎಂ.ಸಿ. ಸದಸ್ಯ ಬೆಪ್ಪುರನ ಮೇದಪ್ಪ, ಸ್ಥಳೀಯ ಗ್ರಾ.ಪಂ.ಉಪಾಧ್ಯಕ್ಷ ಸಾಬ ತಿಮ್ಮಯ್ಯ, ಸದಸ್ಯ ಶಿವಚಾಳಿಯಂಡ ಜಗದೀಶ್, ಆರೋಗ್ಯ ಇಲಾಖೆಯ ಹೇಮಾವತಿ, ಆರೋಗ್ಯ ನಿರೀಕ್ಷಕರಾದ ರಘು, ರವಿ ಮತ್ತಿತರರು ಹಾಜರಿದ್ದರು. -ದುಗ್ಗಳ