ಶ್ರೀಮಂಗಲ, ಡಿ. 16: ಜಿಲ್ಲೆಯಲ್ಲಿ ಬರಗಾಲಕ್ಕೆ ತುತ್ತಾಗಿ ಕಾಫಿ ಫಸಲು ತೀವ್ರ ನಷ್ಟಗೊಂಡಿದ್ದು, ಕಾಫಿ ಮಂಡಳಿ ವತಿಯಿಂದ ಈ ಮೊದಲು ನಡೆಸಲಾದ ಸಮೀಕ್ಷಾ ವರದಿಯಲ್ಲಿ ವಾಸ್ತವಾಂಶವನ್ನು ಮರೆಮಾಚಲಾಗಿದೆ. ಆದ್ದರಿಂದ ಮರುಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬೆಳೆಗಾರ ಒಕ್ಕೂಟದ ನೇತೃತ್ವದಲ್ಲಿ ಬೆಳೆಗಾರರು ನಡೆಸಿದ ಪ್ರತಿಭಟನೆಗೆ ಸ್ಪಂದಿಸಿ ಕಾಫಿ ಮಂಡಳಿ ವತಿಯಿಂದ ಮರು ಸಮೀಕ್ಷೆ ಆರಂಭಿಸಲಾಗಿದೆ.
ಶ್ರೀಮಂಗಲ ಕಾಫಿ ಮಂಡಳಿ ವ್ಯಾಪ್ತಿಗೆ ಒಳಪಡುವ ಶ್ರೀಮಂಗಲ, ಟಿ.ಶೆಟ್ಟಿಗೇರಿ. ಕುಟ್ಟ, ನಾಲ್ಕೇರಿ, ಬಿರುನಾಣಿ, ಹುದಿಕೇರಿ, ಬಲ್ಯಮಂಡೂರು ಮುಂತಾದ ಗ್ರಾ.ಪಂ.ಗಳಲ್ಲಿನ ಕಾಫಿ ತೋಟಗಳಲ್ಲಿ ಕಾಫಿ ಫಸಲು ನಷ್ಟದ ಸಮೀಕ್ಷೆ ನಡೆಸುವಂತೆ ಕಾಫಿ ಮಂಡಳಿ ಉಪನಿರ್ದೇಶಕ ಸತೀಶ್ ಚಂದ್ರ ಅವರು ನಿರ್ದೇಶನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಶ್ರೀಮಂಗಲ ಕಾಫಿ ಮಂಡಳಿ ಜೆ.ಎಲ್.ಒ. ರಮೇಶ್ ಅವರ ನೇತೃತ್ವದಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. ಸಮೀಕ್ಷೆ ಸಂದÀರ್ಭ ಮಳೆ ಆಶ್ರಯಿತ ಕಾಫಿ ತೋಟಗಳಿಗೆ ಜಿಲ್ಲಾ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಸಂದರ್ಭ ಮಳೆ ಆಶ್ರಯಿತ ಕಾಫಿ ತೋಟಗಳಲ್ಲಿ ಏಕ್ರೆ ಒಂದಕ್ಕೆ ಕೇವಲ 100 ರಿಂದ 200 ಕೆ.ಜಿಯಷ್ಟು ಮಾತ್ರ ಕಾಫಿ ಫಸಲು ಇರುವದು ಗೋಚರಿಸಿದೆ.
ಈ ಸಂದÀರ್ಭ ಮಾತನಾಡಿದ ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಅವರು, ಜಿಲ್ಲೆಯು ಸತತವಾಗಿ 2ನೇ ವರ್ಷ ಬರಗಾಲಕ್ಕೆ ತುತ್ತಾಗಿ ಕಾಫಿ ನಷ್ಟ ಉಂಟಾಗಿದೆ. ಕಾಫಿ ಮಂಡಳಿ ಈ ಮೊದಲು ಸಮೀಕ್ಷೆ ನಡೆಸಿ ಸರಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಶೇ 70ರಷ್ಟು ಕಾಫಿ ಫಸಲು ಲಭ್ಯವಿದೆ ಎನ್ನುವ ವರದಿ ವಾಸ್ತವಾಂಶವನ್ನು ಮರೆಮಾಚಿದ್ದಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಕಾಫಿ ಬೆಳೆಗಾರರು ತಮ್ಮ ಕಾಫಿ ತೋಟಗಳನ್ನು ಕಾಫಿ ಮಂಡಳಿ ವತಿಯಿಂದ ಸಮೀಕ್ಷೆ ನಡೆಸಿ ಕಾಫಿ ನಷ್ಟದ ಹಾಗೂ ಕಾಫಿ ಬೆಳೆಗಾರರ ಸಂಕಷ್ಟದ ಪರಿಸ್ಥಿತಿ ಬಗ್ಗೆ ವರದಿ ಸರಕಾರಕ್ಕೆ ಸಲ್ಲಿಸಲು ಸಹಕಾರ ನೀಡಬೇಕು.
ಜಿಲ್ಲೆಯ ಬಹುತೇಕ ಕಡೆ ಬರಗಾಲದಿಂದ ಕಾಫಿ ಫಸಲು ಹಾನಿಯಾಗಿದೆ. ಮಳೆ ಆಶ್ರಯಿತ ಕಾಫಿ ತೋಟದಲ್ಲಿ ಶೇ 90 ರಿಂದ 95 ಫಸಲು ನಷ್ಟವಾಗಿದೆ. ಹಾಗೆಯೇ ಪಂಪು ಸೆಟ್ ಸೌಲಭ್ಯವಿದ್ದರೂ ಬರಗಾಲದಿಂದ ನೀರು ಲಭ್ಯವಾಗದೆ ಈ ಸೌಲಭ್ಯ ಇರುವ ಕಾಫಿ ಬೆಳೆಗಾರರು ಸಹ ಕಾಫಿ ನಷ್ಟಗೊಂಡಿದ್ದಾರೆ ಎಂದು ಶಂಕರು ನಾಚಪ್ಪ ಹೇಳಿದರು.
ಕಾಫಿ ಮಂಡಳಿ ಜೆ.ಎಲ್.ಒ ರಮೇಶ್ ಮಾತನಾಡಿ, ಉಪ ನಿರ್ದೇಶಕ ಸತೀಶ್ ಚಂದ್ರ ಅವರ ನಿರ್ದೇಶನದಂತೆ ಸಮೀಕ್ಷೆ ಕೈಗೊಳ್ಳಲಾಗಿದೆ. ಈಗಾಗಲೆ 14 ಗ್ರಾಮಗಳ ಮಳೆ ಆಶ್ರಯಿತ ತೋಟಗಳಿಗೆ ಬೆಳೆಗಾರರ ಉಪಸ್ಥಿತಿಯಲ್ಲಿ ಭೇಟಿ ನೀಡಲಾಗಿದೆ. ಇಲ್ಲಿನ ವಾಸ್ತವಾಂಶದ ಬಗ್ಗೆ ವರದಿ ಸಲ್ಲಿಸಲಾಗುವದು ಎಂದು ಹೇಳಿದರು.
ಕಾಫಿ ಮಂಡಳಿ ಬೆಳೆನಷ್ಟ ಸಮೀಕ್ಷೆ ಸಮರ್ಪಕವಾಗಿಲ್ಲ. ಇದರಿಂದ ವಾಸ್ತ ವಾಂಶವನ್ನು ಮರೆಮಾಚಿ ಬೆಳೆಗಾರರಿಗೆ ಅನ್ಯಾಯ ಮಾಡಲಾಗಿದೆ. ಆದ್ದರಿಂದ ಮರುಸಮೀಕ್ಷೆ ನಡೆಸಲು ಆಗ್ರಹಿಸಿ ಜಿಲ್ಲಾ ಬೆಳೆಗಾರರ ಒಕ್ಕೂಟದಿಂದ ಶ್ರೀಮಂಗಲ ಕಾಫಿ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಈ ಸಂದರ್ಭ ಕಾಫಿ ಮಂಡಳಿ ಜಂಟಿ ನಿರ್ದೇಶಕ ಹೇಮಂತ್ ಕುಮಾರ್, ಜಿಲ್ಲಾಧಿಕಾರಿ, ಶಾಸಕ, ಸಂಸದರುಗಳ ಮೂಲಕ ಮರು ಸಮೀಕ್ಷೆಗೆ ಆಗ್ರಹಿಸಲಾಗಿತ್ತು.
ಈ ಸಂದರ್ಭ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಸದಸ್ಯ ಬಲ್ಯಮಿದೇರಿರ ಮೋಹನ್ ಕುಮಾರ್, ರೈತ ಮಹಿಳೆ ಬಲ್ಯಮೀದೇರಿರ ವಸಂತಿ ಗಣಪತಿ, ಗ್ರಾ.ಪಂ. ಸದಸ್ಯ ಅಣ್ಣೀರ ಮಲ್ಲಿಗೆ ಪೂಣಚ್ಚ ಮತ್ತಿತರರು ಹಾಜರಿದ್ದರು.