ಗೋಣಿಕೊಪ್ಪಲು, ಮೇ 23 : ದಕ್ಷಿಣ ಕೊಡಗಿನ ಬಾಳೆಲೆ ಕಾಫಿ ಬೆಳೆಗಾರರ ಹಿತದೃಷ್ಟಿಯಿಂದಾಗಿ ಕಾಫಿ ಮಂಡಳಿ ಸದಸ್ಯರು ಹಾಗೂ ಈ ವಿಭಾಗದ ಕಾಫಿ ಹೋರಾಟಗಾರರ ಪ್ರಯತ್ನದಿಂದಾಗಿ 2010 ರಲ್ಲಿ ಕಾಫಿ ಮಂಡಳಿ ವಿಸ್ತರಣಾ ವಿಭಾಗವನ್ನು ಬಾಳೆಲೆಯಲ್ಲಿ ತೆರೆಯಲಾಗಿತ್ತು.

ಇತ್ತೀಚೆಗೆ ಬಾಳೆಲೆ ಕಚೇರಿಗೆ ನಿಯೋಜಿತಗೊಂಡಿದ್ದ ಅಧಿಕಾರಿ ನಿವೃತ್ತಗೊಂಡಿದ್ದರು. ಈ ಹಂತದಲ್ಲಿ ಗೋಣಿಕೊಪ್ಪಲು ಕಾಫಿ ವಿಸ್ತರಣಾಧಿಕಾರಿ ಶಂಕರ್ ಎಂಬವರು ಅಧಿಕಾರವಹಿಸಿಕೊಂಡಿದ್ದರು. ಆದರೆ, ಸುಮಾರು 6 ತಿಂಗಳು ಕಳೆದರೂ ಅಧಿಕಾರಿ ಶಂಕರ್ ಇತ್ತ ಭೇಟಿ ನೀಡುವ ವ್ಯವಧಾನವನ್ನೇ ಮಾಡಲಿಲ್ಲ. ಈ ಹಿಂದಿನ ಅಧಿಕಾರಿಗಳು ಈ ವಿಭಾಗದ ಕಾಫಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುತ್ತಿದ್ದು ತುರ್ತು ಪರಿಹಾರ ಮಾರ್ಗ ಕಂಡು ಕೊಳ್ಳಲು ಅನುಕೂಲವಾಗುತ್ತಿತ್ತು.

ಕಳೆದ 6 ತಿಂಗಳಿನಿಂದ ಕಚೇರಿ ಬೀಗ ಜಡಿದ ಹಿನ್ನೆಲೆ ಈ ವಿಭಾಗದ ಕಾಫಿ ಬೆಳೆಗಾರರು ಬವಣೆಗೆ ಒಳಗಾಗಿರುವದಾಗಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಸಂಚಾಲಕ ಅರಮಣಮಾಡ ಸತೀಶ್ ದೇವಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಬಾಳೆಲೆ ಕಚೇರಿಗೆ ಅಧಿಕಾರಿಗಳ ಭೇಟಿಗೆ ವಾಹನ ಸೌಲಭ್ಯ, ಭತ್ಯೆ, ಸಹದ್ಯೋಗಿಗಳನ್ನು ಕಾಫಿ ಮಂಡಳಿ ನೇಮಕ ಮಾಡಿದ್ದಾಗ್ಯೂ ಇದೀಗ ಶಂಕರ್ ಎಂಬ ಅಧಿಕಾರಿಯ ವರ್ತನೆ ಬೇಸರ ತರಿಸಿದೆ. ಅಧಿಕಾರಿ ತುರ್ತು ಬಾಳೆಲೆ ವಿಭಾಗದ ಬೆಳೆಗಾರರ ಸಮಸ್ಯೆಗೆ ಸ್ಪಂದಿಸದೇ ಹೋದಲ್ಲಿ ಅರುವತ್ತೊಕ್ಕಲು ಕಾಫಿ ಮಂಡಳಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು. ವೀರಾಜಪೇಟೆ ಪ್ರಾದೇಶಿಕ ಮಂಡಳಿ ಕಚೇರಿಯ ಉಪನಿರ್ದೇಶಕರನ್ನು ವಿಚಾರವಾಗಿ ಸಂಪರ್ಕಿಸಿದರೂ ನಿರ್ಲಕ್ಷ್ಯವಹಿಸಿರು ವದಾಗಿ ಸತೀಶ್ ದೇವಯ್ಯ ಆರೋಪಿಸಿದ್ದಾರೆ.