ಶ್ರೀಮಂಗಲ, ಡಿ. 3 : ದಕ್ಷಿಣ ಭಾರತದ ಬಹುಭಾಗಕ್ಕೆ ಕುಡಿಯುವ ಹಾಗೂ ಕೃಷಿಗೆ ನೀರು ಒದಗಿಸುವ ಕಾವೇರಿ-ಲಕ್ಷ್ಮಣತೀರ್ಥ ಜಲಾನಯನ ಪ್ರದೇಶವಾಗಿರುವ ಕೊಡಗು ಜಿಲ್ಲೆ, ಜಲಾನಯನ ಪ್ರದೇಶಕ್ಕೆ ಪರಿಸರ ಸ್ನೇಹಿಯಾದ ಕಾಫಿ ಮತ್ತು ಭತ್ತದ ಕೃಷಿ ಮಹತ್ವದಾಗಿದೆ. ಜಿಲ್ಲೆಯ ಕಾಫಿ ಮತ್ತು ಭತ್ತದ ಕೃಷಿಯನ್ನು ಉಳಿಸಿ ಕೊಳ್ಳದಿದ್ದರೆ ಭವಿಷ್ಯದಲ್ಲಿ ಕಾವೇರಿ ನದಿ ಬರಡಾಗಿ ದಕ್ಷಿಣ ಭಾರತದಲ್ಲಿ ಶಾಶ್ವತ ವಾದ ಬರಗಾಲದ ಛಾಯೆ ಉಂಟಾ ಗಲಿದೆ ಎಂದು ಜಿಲ್ಲಾ ಬೆಳೆಗಾರರ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

ಗೋಣಿಕೊಪ್ಪ ಸಿಲ್ವರ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಲಾಯಿತು.

ಕೊಡಗಿನ ಪರಿಸರ ಹಾನಿಯಿಂದ ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಕರಿಮೆಣಸು ಇತ್ಯಾದಿ ಫಸಲುಗಳ ಮೇಲೆ ದುಷ್ಪರಿಣಾಮ ಉಂಟಾಗಿದೆ. ಇದರಿಂದ ಹವಾಮಾನ ವೈಪರೀತ್ಯ ಉಂಟಾಗಿ ಜಿಲ್ಲೆಯ ನೆಲದಲ್ಲಿ ಉಷ್ಣಾಂಶ ಹೇರಿಕೆಯಾಗಿದೆ. ಕಾಫಿ ಕರಿಮೆಣಸು ಬೆಳೆಗೆ ವರ್ಷದ ಬಹುಕಾಲ ತೇವಾಂಶ ಇರಬೇಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿದೆ. ಆದ್ದರಿಂದ ಜಿಲ್ಲೆಯ ಪರಿಸರದ ಮೇಲೆ ಉಂಟಾಗುವ ಹಾನಿ ದಕ್ಷಿಣ ಭಾರತದ ಮೇಲೆ ಉಂಟಾಗಲಿದೆ. ಆದ್ದರಿಂದ ಎಷ್ಟೇ ದುಬಾರಿಯಾದರೂ ಜಿಲ್ಲೆಯ ಕಾಫಿ, ಭತ್ತದ ಕೃಷಿಯಿಂದ ರೈತರು ವಿಮುಖರಾಗದಂತೆ ಸರಕಾರ ಎಚ್ಚರವಹಿಸಬೇಕು. ಇಲ್ಲದಿದ್ದರೆ ಎಷ್ಟೇ ಬೆಲೆ ತೆತ್ತರೂ ಇದರಿಂದ ಉಂಟಾಗುವ ದುಷ್ಪರಿಣಾಮವನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಪ್ರಮುಖರು ಅಭಿಪ್ರಾಯ ಪಟ್ಟರು. ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಿ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಪ್ರಕಟಿಸುವ ಮೂಲಕ ಕಾಫಿ ಬೆಳೆಗಾರರು ಕಾಫಿ ಬೆಳೆ ಬಿಟ್ಟು ಅನ್ಯ ಉದ್ದೇಶಕ್ಕೆ ಜಾಗ ಪರಿವರ್ತನೆ ಮಾಡುವದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.

ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಗಮನ ಸೆಳೆದಿರುವ ಸಂಸದರು: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಸಂಸದರಾದ ಶೋಭ ಕರದ್ಲಾಜೆ, ಯಡಿಯೂರಪ್ಪ ಅವರೊಂದಿಗೆ ಬಿ.ಜೆ.ಪಿ. ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದಾರೆ. ನೋಟು ಅಮಾನ್ಯತೆ ಬಗ್ಗೆ ಡಿಸೆಂಬರ್ ಅಂತ್ಯದವರೆಗೆ ಕಪ್ಪು ಹಣದ ಬಗ್ಗೆ ನಿರ್ಧಿಷ್ಟವಾದ ಚಿತ್ರಣ ದೊರೆಯಲಿದೆ. ಈ ಬಗ್ಗೆ ಸರಕಾರದ ವಿವಿಧ ಇಲಾಖೆ ತೊಡಗಿಸಿಕೊಂಡಿದೆ. ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿ ಸಲು ಕೇಂದ್ರ ಸರಕಾರದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಂಸದರು ಜಿಲ್ಲೆಯ ಸಣ್ಣ ಕಾಫಿ ಬೆಳೆಗಾರರ ಪರವಾದ ನಿಲುವು ಹೊಂದಿದ್ದಾರೆ. ಈ ಬಗ್ಗೆ ತಾವು ಸಂಪರ್ಕಿಸಿದಾಗ ಪ್ರತಾಪ್ ಸಿಂಹ ಅವರು ವಿವರಿಸಿರುವದಾಗಿ ಒಕ್ಕೂಟದ ಅಧ್ಯಕ್ಷ ಶಂಕರು ನಾಚಪ್ಪ ತಿಳಿಸಿದರು.

ಕೊಲ್ಲಿತೋಡು ನದಿ ತಿರುವಿಗೆ ವಿರೋಧ: ದಕ್ಷಿಣ ಕೊಡಗಿನ ಕೊಂಗಣಕೊಲ್ಲಿತೋಡು ನದಿಯನ್ನು ಲಕ್ಷ್ಮಣ ತೀರ್ಥಕ್ಕೆ ತಿರುಗಿಸುವ ಯೋಜನೆಯು ಸ್ಥಳೀಯ ಜನರ ಅಭಿಪ್ರಾಯ ಪಡೆಯದೆ ಯೋಜನೆ ರೂಪಿಸುವದಕ್ಕೆ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಜಿಲ್ಲೆಯ ರೈತರು ಹಾಗೂ ಬೆಳೆಗಾರರಿಗೆ ಜಿಲ್ಲೆಯ ನದಿಗಳ ನೀರು ಬಳಕೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳ ಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ನದಿಗಳಿಗೆ ಬರ ಪರಿಹಾರ ಕಾಮಗಾರಿ ಯಡಿ ಚೆಕ್ ಡ್ಯಾಂಗಳನ್ನು ನಿರ್ಮಿಸಿ ನೀರು ಬಳಕೆಗೆ ಅನುವು ಮಾಡಿಕೊಡ ಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು.

ಎಂ.ಎಲ್.ಸಿ. ಅವರಿಂದ ರೈತಪರ ವಿಚಾರ ಪ್ರಸ್ತಾಪಕ್ಕೆ ಸ್ವಾಗತ: ವಿಧಾನ ಪರಿಷತ್ತಿನಲ್ಲಿ ಜಿಲ್ಲೆಯ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಅವರು ಜಿಲ್ಲೆಯ ಭತ್ತದ ಗದ್ದೆಗಳ ಪುನಶ್ಚೇತನಕ್ಕೆ ಪ್ರೋತ್ಸಾಹ ನೀಡುವ ಕ್ರಮ, ಕೃಷಿ ಉಪಕರಣಗಳನ್ನು ಬಾಡಿಗೆಗೆ ಒದಗಿಸುವ ಯೋಜನೆಗಳು ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದ್ದು, ಜಿಲ್ಲೆಯ ಕೃಷಿ ಭೂಮಿಗಳು ಬಹುತೇಕ ಪಾಲುಬಿಟ್ಟಿದ್ದು, ಇವುಗಳಲ್ಲಿ ಮತ್ತೆ ಕೃಷಿ ಮಾಡುವಂತಾಗಲು ಇವುಗಳನ್ನು ಲಾಭದಾಯಕವಾಗಿ ಪರಿವರ್ತಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಪ್ರೋತ್ಸಾಹಧನ ನೀಡಬೇಕು. ಭತ್ತದ ಗದ್ದೆಗಳಲ್ಲಿ ನೀರು ಕೃಷಿ ಸಮಯದಲ್ಲಿ ನಿರಂತರವಾಗಿ ಇಂಗುವ ಮೂಲಕ ಅಂತರ್ಜಲ ಹೆಚ್ಚಾಗಿ ಈ ವ್ಯಾಪ್ತಿ ನದಿ- ತೋಡುಗಳು ವರ್ಷಂಪೂರ್ತಿ ಬತ್ತದೆ ಹರಿಯುತ್ತವೆ. ಈ ನಿಟ್ಟಿನಲ್ಲಿ ವೀಣಾ ಅಚ್ಚಯ್ಯ ಅವರು ವಿಚಾರ ಪ್ರಸ್ತಾಪಿಸಿದ್ದನ್ನು ಸ್ವಾಗತಿಸಲಾಯಿತು.

ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ, ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ನಿರ್ದೇಶಕರುಗಳಾದ ಕೈಬುಲಿರ ಹರೀಶ್, ಬೊಳ್ಳೇರ ರಾಜ ಸುಬ್ಬಯ್ಯ, ಕಳ್ಳಿಚಂಡ ರತ್ನ ಕರುಂಬಯ್ಯ ಹಾಜರಿದ್ದರು.