ಸೋಮವಾರಪೇಟೆ,ನ.30: ಕಾಫಿ ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿರಬೇಕು. ಮಲೆನಾಡು ಭಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಫಿ ಬೆಳೆಗಾರರಿಗೆ ಸರ್ಕಾರದಿಂದ ಸವಲತ್ತುಗಳನ್ನು ಒದಗಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಲೋಕಸಭೆಯ ಕಲಾಪದಲ್ಲಿ ಭಾಗವಹಿಸಿ ಈ ಬಗ್ಗೆ ಸರ್ಕಾರದ ಗಮನ ಸೆಳೆದ ಸಂಸದರು, ಸಮಗ್ರ ಕಾಫಿ ಅಭಿವೃದ್ಧಿ ಯೋಜನೆಯಡಿ ಬಾಕಿ ಇರುವ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಬೇಕು, ಬೆಳೆ ಹಾನಿಗೊಳಗಾದ ಕಾಫಿ ಬೆಳೆಗಾರರಿಗೆ ವಿಮಾ ಸೌಲಭ್ಯ ಒದಗಿಸುವಿಕೆ, ಸಬ್ಸಿಡಿ ನೀಡುವಿಕೆ ಮತ್ತು ಪ್ರಸ್ತಾವಿತ ಜಿಎಸ್‍ಟಿ ಕಾಯ್ದೆ ವಿನಾಯಿತಿ ಪಟ್ಟಿಯಲ್ಲಿ ಕಾಫಿಯನ್ನೂ ಸೇರಿಸುವದು ಇತ್ಯಾದಿ ಕ್ರಮಗಳನ್ನು ಶೀಘ್ರ ಅನುಷ್ಠಾನಗೊಳಿಸಿ ಕಾಫಿ ಬೆಳೆಗಾರರ ಹಿತ ಕಾಪಾಡುವಂತೆ ಸರ್ಕಾರದ ಗಮನ ಸೆಳೆದರು.
ಲೋಕಸಭೆಯಲ್ಲಿ ನಿಯಮ 377ರಡಿ ವಿಷಯ ಪ್ರಸ್ತಾಪಿಸಿದ ಸಂಸದೆ ಶೋಭಾ ಅವರು, 12ನೇ ಪಂಚವಾರ್ಷಿಕ ಯೋಜನೆಯಡಿ 950ಕೋಟಿಯ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆಯು 2014ರಲ್ಲಷ್ಟೇ ಕಾರ್ಯರೂಪಕ್ಕೆ ಬಂದಿದ್ದು, 2017ರಲ್ಲಿ 12ನೇ ಪಂಚವಾರ್ಷಿಕ ಯೋಜನೆ ಮುಕ್ತಾಯಗೊಳ್ಳಲಿದೆ. ಪ್ರಸ್ತುತ 950ಕೋಟಿ ರೂಪಾಯಿಗಳ ಪೈಕಿ ಬಹುಪಾಲು ಮೊತ್ತ ಬಿಡುಗಡೆಗೆ ಬಾಕಿಯಿದ್ದು, ಇದನ್ನು ನಿಗದಿತ ಕಾಲಮಿತಿಯೊಳಗೆ ಸಂಪೂರ್ಣವಾಗಿ ಸದುಪಯೋಗಪಡಿಸಬೇಕು ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.
12ನೇ ಪಂಚವಾರ್ಷಿಕ ಯೋಜನೆಯಲ್ಲಿ ಮೀಸಲಿಡಲಾದ ಅನುದಾನವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡಿದ್ದಲ್ಲಿ, ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿರುವ ಕಾಫಿ ಬೆಳೆಗಾರರಿಗೆ ಹೆಚ್ಚಿನ ನೆರವಾಗಲಿದೆ.