ಮಡಿಕೇರಿ, ಸೆ. 26: ಸಾಮಾನ್ಯ ವಾಗಿ ಕಾಫಿ ಕಾಂಡ ಕೊರಕದ ಪ್ರೌಢ ಕೀಟಗಳು ಚಳಿಗಾಲದ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಲ್ಲಿ ಹೆಚ್ಚಾಗಿ ಹೊರಬರುವದು ಕಂಡು ಬಂದಿದ್ದು, ಈ ಧೀರ್ಘಾವಧಿಯಲ್ಲಿ ಕಾಂಡ ಕೊರಕವು ಆಕ್ರಮಣದ ಹೊಸ ಚಕ್ರವನ್ನು ಪ್ರಾರಂಭಿಸುವದರಿಂದ ಈ ಸಮಯ ನಿರ್ಣಾಯಕವಾಗಿರುತ್ತದೆ. ಆದುದರಿಂದ ಒಂದು ವೇಳೆ ಈ ಕಾಲದಲ್ಲಿ ಎಲ್ಲಾ ಅರೇಬಿಕಾ ಕಾಫಿ ಬೆಳೆಗಾರರು ಸಕಾಲದಲ್ಲಿ ಸೂಕ್ತವಾದ ಹತೋಟಿ ಕ್ರಮಗಳನ್ನು ಅನುಸರಿಸಿದರೆ ಕೀಟದ ನಿಯಂತ್ರಣ ವನ್ನು ಪರಿಣಾಮಕಾರಿಯಾಗಿ ಮಾಡಲು ಸಹಾಯಕವಾಗುತ್ತದೆ.

ಪ್ರಸಕ್ತ ವರ್ಷದಲ್ಲಿ ಕಾಫಿ ಬೆಳೆಯುವ ಬಹುತೇಕ ಪ್ರದೇಶದಲ್ಲಿ ಮುಂಗಾರು ಮಳೆಯು ಕ್ಷೀಣ ವಾಗಿದ್ದು, ಚದುರಿದ ಮಳೆ ಮತ್ತು ಪ್ರಕರವಾದ ಬೆಳಕಿನ ವಾತಾವರಣ ವಿರುವದರಿಂದ ಕೀಟಗಳ ಹಾರಾಟ ಕಾಲ ಮುಂಚಿತವಾಗಿಯೇ ಶುರುವಾಗುವ ಸಾಧ್ಯತೆ ಇದೆ. ಆದುದರಿಂದ ಬೆಳೆಗಾರರು ಹತೋಟಿ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ.

ಹತೋಟಿ ಕ್ರಮಗಳು ಇಂತಿವೆ: ಇಡೀ ತೋಟದಲ್ಲಿ ಸೆಪ್ಟೆಂಬರ್ ತಿಂಗಳೊಳಗಾಗಿ ಕೀಟ ಪೀಡಿತ ಗಿಡಗಳನ್ನು ಹುಡುಕಿ ಕಿತ್ತು ನಾಶ ಮಾಡಬೇಕು. ಹುಡುಕುವಾಗ ಕೀಟಬಾಧಿತ ಗಿಡಗಳಲ್ಲಿ ಹೆಚ್ಚಿನ ಫಸಲು ಇದ್ದರೆ, ಅಂತಹ ಗಿಡಗಳನ್ನು ಬುಡ ಸಹಿತ ಕಿತ್ತು ಹಾಕುವ ಬದಲು ಪ್ರಧಾನ ಕಾಂಡ ಹಾಗೂ ದಪ್ಪ ರೆಂಬೆಗಳನ್ನು ಗೋಣಿ ಚೀಲದ ಪಟ್ಟಿಯಿಂದ ಸ್ವಲ್ಪವೂ ಜಾಗ ಬಿಡದಂತೆ ಸುತ್ತಬೇಕು. ಅಂತಹ ಗೋಣಿಚೀಲ ಸುತ್ತಿದ ಕೀಟಬಾಧಿತ ಗಿಡಗಳು ಮತ್ತು ಎಲ್ಲಾ ಆರೋಗ್ಯವಾದ ಗಿಡಗಳಿಗೆ ಕ್ಲೋರೋಫೈರಿಫಾಸ್ 50 ಇಸಿ ಮತ್ತು ಸೈಪರ್ ಮೆತ್ರಿನ್ 5 ಇಸಿ ಹೊಂದಿರುವ ಕೀಟನಾಶಕವನ್ನು 200 ಲೀ. ನೀರಿಗೆ 240 ಮಿ.ಲೀ. ಪ್ರಮಾಣ ದಲ್ಲಿ, 200 ಮಿ.ಲೀ. ಅಂಟು ದ್ರಾವಣದ ಜೊತೆಗೆ ಬೆರೆಸಿ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳ ಮೇಲೆ ಸಿಂಪಡಿಸಬೇಕು.

ಶಿಫಾರಸ್ಸು ಮಾಡಿದ ಕೀಟ ನಾಶಕವನ್ನು ಬ್ಯಾಕ್ ಪ್ಯಾಕ್ ಸ್ಪ್ರೇಯರ್‍ಗಳನ್ನು ಬಳಸಿ(ಮಾನವ ಚಾಲಿತ ಅಥವಾ ಬ್ಯಾಟರಿ ಚಾಲಿತ) ಅಕ್ಟೋಬರ್ ಎರಡನೇ ವಾರದೊಳಗೆ ಸಿಂಪರಣೆ ಮಾಡಬೇಕು. ಸಿಂಪರಣೆ ಯನ್ನು ಮಾಡುವಾಗ ಪ್ರಧಾನ ಕಾಂಡ ಹಾಗೂ ದಪ್ಪ ರೆಂಬೆಗಳು ಸಂಪೂರ್ಣವಾಗಿ ತೊಯ್ಯುವಂತೆ ಎಚ್ಚರವಹಿಸಬೇಕು. ಕೀಟನಾಶಕವನ್ನು ಎಲೆಗಳ ಮೇಲೆ ಸಿಂಪಡಿಸುವ ಅವಶ್ಯಕತೆ ಇರುವದಿಲ್ಲ. ಕೀಟನಾಶಕ ಸಿಂಪರಣೆಯ ನಂತರ ತಕ್ಷಣವೇ ಮಳೆ ಬಂದಲ್ಲಿ, ಎರಡು ವಾರದೊಳಗಾಗಿ ಮರು ಸಿಂಪರಣೆ ಮಾಡಬೇಕು ಎಂದು ವೀರಾಜಪೇಟೆ ಕಾಫಿ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.