ಸೋಮವಾರಪೇಟೆ, ನ. 29: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಕಾಫಿ ಪಲ್ಪ್ ತ್ಯಾಜ್ಯ ನೀರಿನ ಸಂಸ್ಕರಣೆ ಮತ್ತು ಮರು ಬಳಕೆಯ ಬಗ್ಗೆ ಕಾರ್ಯಾಗಾರ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.

ಸೂಕ್ಷ್ಮ ಜೀವಶಾಸ್ತ್ರ ಮತ್ತು ಕಿಣ್ವ ತಂತ್ರಜ್ಞಾನ ವಿಭಾಗದ ಪ್ರಧಾನ ವಿಜ್ಞಾನಿ ಡಾ. ಕೆ.ಎ. ಅನು ಅಪ್ಪಯ್ಯ ಅವರು ಕಾಫಿ ಪಲ್ಪಿಂಗ್ ತ್ಯಾಜ್ಯ ನೀರಿನ ಸಂಸ್ಕರಣೆಗಾಗಿ ಅಭಿವೃದ್ಧಿಪಡಿಸಿರುವ ಬಯೋಟ್ರಿಟ್ ಹೆಸರಿನ ಸೂಕ್ಷ್ಮಾಣು ಜೀವಿ ಉತ್ಪನ್ನದ ಬಗ್ಗೆ ಅಥರ್ವ ಪ್ಲಾಂಟೇಷನ್ ಸಲ್ಯೂಷನ್ಸ್‍ನ ಅಧಿಕಾರಿ ಕಾಮರಾಜ್ ಪ್ರಸಾದ್ ಮಾಹಿತಿ ನೀಡಿದರು.ಕಾಫಿ ಪಲ್ಪಿಂಗ್ ತ್ಯಾಜ್ಯ ನೀರಿನಲ್ಲಿ ಹಾನಿಕಾರಕ ಅನಿಲಗಳಾದ ಸಲ್ಫರ್ ಡೈ ಆಕ್ಸೈಡ್, ಹೈಡ್ರೋಜನ್ ಡೈ ಆಕ್ಸೈಡ್, ಕಾರ್ಬನ್ ಡೈ ಆಕ್ಸೈಡ್ ಮತ್ತು ಮಿಥೇನ್ ವಾತಾವರಣಕ್ಕೆ ಬಿಡುಗಡೆಗೊಂಡು ಸುತ್ತಲಿನ ಪರಿಸರದಲ್ಲಿ ಕೆಟ್ಟ ವಾಸನೆ ಪಸರಿಸುತ್ತದೆ ಎಂದು ಹೇಳಿದರು.

ಈ ಅವಸ್ಥೆಯಲ್ಲಿ ತ್ಯಾಜ್ಯ ನೀರು ಅತೀ ವಿಷಕಾರಿಯಾಗಿದ್ದು ಕೆರೆ, ತೊರೆ, ಹೊಳೆ ನೀರಿಗೆ ಸೇರಿದಲ್ಲಿ ಜಲಚರಗಳು ಮೃತಪಟ್ಟು ಜಲ ಮಾಲಿನ್ಯ ಉಂಟಾಗುತ್ತದೆ. ಈ ನೀರು ಭೂಮಿ ಒಳಕ್ಕೆ ಸೇರಿ ಅಂತರ್ಜಲವನ್ನು ಮಾಲಿನ್ಯ ಮಾಡುತ್ತದೆ ಎಂದರು.

ಇಂತಹ ವಿಷಕಾರಿ ತ್ಯಾಜ್ಯದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಿಕೊಳ್ಳಲು ಅನೇಕ ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಿದ್ದವು. ಸಿ.ಎಸ್.ಐ.ಆರ್-ಸಿ.ಎಫ್.ಟಿ.ಆರ್. ಸೂಕ್ಷ್ಮ ಜೀವಶಾಸ್ತ್ರ ಮತ್ತು ಕಿಣ್ವ ತಂತ್ರಜ್ಞಾನ ವಿಭಾಗದ ವತಿಯಿಂದ ಬಯೋಟ್ರಿಟ್ ಉತ್ಪನ್ನವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಪುಡಿಯ ರೂಪದಲ್ಲಿದ್ದು, ಕಾಫಿ ಪಲ್ಪಿಂಗ್ ನೀರಿಗೆ ಮಿಶ್ರಣ ಮಾಡಿ ಅದೇ ನೀರನ್ನು ಮರುಬಳಕೆ ಮಾಡಬಹುದಾಗಿದೆ ಎಂದು ಹೇಳಿದರು.

ಈ ಉತ್ಪನ್ನವನ್ನು ಖರೀದಿಸಿ, 25 ದಿನಗಳ ಒಳಗೆ ಉಪಯೋಗಿಸಬೇಕು. ಈ ಕಾರಣದಿಂದ ಮುಂಗಡ ಕಾಯ್ದಿರಿಸಬೇಕು. ಮಾಹಿತಿಗಾಗಿ ಚಿಟಿuಚಿಠಿಠಿಚಿiಚಿh@ಛಿಜಿಣಡಿi.ಡಿes.iಟಿ ಸಂಪರ್ಕಿಸಬಹುದು ಎಂದರು. ಕಾರ್ಯಾಗಾರದಲ್ಲಿ ಲಯನ್ಸ್ ಅಧ್ಯಕ್ಷ ಎ.ಎಸ್. ಮಹೇಶ್, ಕಾರ್ಯದರ್ಶಿ ಮಂಜುನಾಥ ಚೌಟ ಇದ್ದರು.