*ಗೋಣಿಕೊಪ್ಪಲು, ಆ. 2 : ಸುಸಜ್ಜಿತ ರಸ್ತೆಯಲ್ಲಿ ಚಲಿಸುವಾಗಲೇ ವಾಹನಗಳು ಹಲವಾರು ಅವಘಡಗಳಿಗೆ ಒಳಗಾಗುತ್ತವೆ. ಅಂತದ್ದರಲ್ಲಿ ರಸ್ತೆಯೇ ಇಲ್ಲದ ಕಾಫಿ ತೋಟದ ನಡುವಿನ ಕೆಸರು ಮಯ ರಸ್ತೆಯಲ್ಲಿ ಅದರಲ್ಲೂ ಸ್ಪರ್ಧೆಗಾಗಿ ಚಲಿಸುವಾಗ ವಾಹನಗಳ ಮತ್ತು ವಾಹನ ಚಾಲಕರ ಸ್ಥಿತಿ ಹೇಗಿರುತ್ತದೆ? ಇದನ್ನು ಕಣ್ಣಾರೆ ನೋಡಿಯೇ ಅನುಭವಿಸಬೇಕು. ಇಂತಹ ರೋಚಕ ಕ್ಷಣ ಮಂಗಳವಾರ ಪಾಲಿಬೆಟ್ಟದಲ್ಲಿ ನಡೆದ ಮೋಟಾರ್ ಕ್ರಾಸ್ ರ್ಯಾಲಿಯಲ್ಲಿ ಕಂಡು ಬಂದಿತು.
ಮಾರುತಿ ಸುಜುಕಿ ಪ್ರಾಯೋಜಿಸಿ, ಮೋಟಾರ್ ಸ್ಪೋಟ್ರ್ಸ್ ಕಂಪನಿ ಆಯೋಜಿಸಿದ್ದ ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳ ಸ್ಪರ್ಧೆಯು ನೋಡುಗರ ಮನಸೆಳೆಯಿತು. ಪಾಲಿಬೆಟ್ಟದ ಕೂರ್ಗ್ ಕ್ಲಿಪ್ ರೆಸಾರ್ಟ್ ಮತ್ತು ಕಾಯಂಬೆಟ್ಟ ಕಾಫಿ ಎಸ್ಟೇಟ್ ಒಳಗೆ ನಡೆದ ರ್ಯಾಲಿಯಲ್ಲಿ ಅಂತರ್ರಾಷ್ಟ್ರೀಯ ರ್ಯಾಲಿ ಪಟುಗಳಾದ ದೆಹಲಿಯ ಸುರೇಶ್ ರಾಣಾ, ಸ್ಯಾಂಡಿ, ಅಮನ್, ಅಂಜಯ್, ಅಗರ್‍ವಾಲ್, ರಾಜಶೇಖರ ಗೌಡ ಪಾಲ್ಗೊಂಡಿದ್ದರು.
ಮಹಿಳಾ ವಿಭಾಗದಲ್ಲಿ ಬನ್ನಿಯಾದವ್, ಅಸನ್‍ಗೌಡ, ಅನ್ನುರಾಣಾ ಭಾಗವಹಿಸಿದ್ದರು. ಬೈಕ್ ವಿಭಾಗದಲ್ಲಿ ನಟರಾಜ್, ತನ್ವೀರ್, ಐಶ್ವರ್ಯ ಪಾಲ್ಗೊಂಡಿದ್ದರು. ಕೂರ್ಗ್ ಕ್ಲಿಪ್ ರೆಸಾರ್ಟ್ ಮತ್ತು ಕಾಯಂಬೆಟ್ಟ ಕಾಫಿ ತೋಟದ ಒಳಗಿನ ಕಚ್ಚಾ ರಸ್ತೆಯಲ್ಲಿ ನಾಲ್ಕುಚಕ್ರದ ವಾಹನ ಭೋರ್ಗರೆಯುತ್ತಾ ಸಾಗುವಾಗ ನೋಡುಗÀರ ಮೈ ರೋಮಾಂಚನ ಗೊಳ್ಳುತ್ತಿತ್ತು. ಕಾಫಿ ಗಿಡಗಳ ನಡುವೆ ಜೀಪು ಕೂಡ ಹೋಗಲಾಗದ ಸ್ಥಿತಿಯಲ್ಲಿದ್ದ ಮಾರ್ಗದಲ್ಲಿ ರ್ಯಾಲಿ ಪಟುಗಳು ತಮ್ಮ ಕಾರುಗಳನ್ನು ನುಗ್ಗಿಸಿ ಅತ್ಯಂತ ಚಾಕಚಕ್ಯತೆಯಿಂದ ಓಡಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಹಲವು ಕಾರುಗಳು ಮುಂದೆ ಚಲಿಸಲಾಗದೆ ಮಗುಚಿ ಬೀಳುತ್ತಿದ್ದವು. ಬಿದ್ದ ವಾಹನಗಳನ್ನು ಆಯೋಜಕರು ಕೂಡಲೆ ಸ್ಥಳಕ್ಕೆ ತೆರಳಿ ಮೇಲೆತ್ತಿ ಮತ್ತೆ ಚಾಲನೆಗೆ ಅಣಿಗೊಳಿಸುತ್ತಿದ್ದರು.
ರ್ಯಾಲಿಗಾಗಿಯೇ ಮೀಸಲಿದ್ದ ವಾಹನಗಳು ಮಣ್ಣು ಹಿಡಿದುದನ್ನು ಕಂಡು ನಗೆ ಬರುತಿತ್ತು.ಆದರೆ ಅವುಗಳು ಓಡುವ ಬಗೆ ಮಾತ್ರ ಅಚ್ಚರಿ ಮೂಡಿಸುತಿತ್ತು. 4 ಚಕ್ರ ವಾಹನ ರ್ಯಾಲಿಯಲ್ಲಿ ಇಬ್ಬರು ಮಹಿಳೆಯರು, ಬೈಕ್ ರ್ಯಾಲಿಯಲ್ಲಿ ಒಬ್ಬ ಮಹಿಳೆ ಪಾಲ್ಗೊಂಡು ಮೆಚ್ಚುಗೆ ಪಡೆದರು. ರ್ಯಾಲಿಯಲ್ಲಿ ಒಟ್ಟು 30 4ಚಕ್ರ ವಾಹನ ಮತ್ತು 30 ದ್ವಿಚಕ್ರ ವಾಹನಗಳು ಪಾಲ್ಗೊಂಡಿದ್ದವು.
ಮೋಟಾರ್ ಸ್ಪೋಟ್ರ್ಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ರಾಯ್‍ಥೋಮಸ್ ಧ್ವಜಾ ಬೀಸುವ ಮೂಲಕ ರ್ಯಾಲಿಗೆ ಬೆಳಿಗ್ಗೆ 7 ಗಂಟೆ ವೇಳೆಗೆ ಚಾಲನೆ ನೀಡಿದರು. ಕೂರ್ಗ್ ಕ್ಲಿಪ್ಪಿಂಗ್ ರೆಸಾರ್ಟ್ ಉದ್ಯೋಗಿ ಲೀಹಿತ್ ನಾಯ್ಡು ರ್ಯಾಲಿಯ ಟ್ರ್ಯಾಕ್ ಸಿದ್ದಪಡಿಸಿದ್ದರು. ತಾ.3ರಂದು ರ್ಯಾಲಿ ಶಿವಮೊಗ್ಗ ತಲಪಲಿದ್ದು ಅಲ್ಲಿಂದ ಮುಂದೆ ತಾ. 5 ರಂದು ಗೋವಾದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದರು.
ರ್ಯಾಲಿಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ರೂ 1ಲಕ್ಷ, ದ್ವಿತೀಯ ಬಹುಮಾನ ರೂ. 75 ಸಾವಿರ, ತೃತೀಯ ರೂ. 50 ಸಾವಿರ ಹಾಗೂ ರೂ. 20 ಮತ್ತು ರೂ. 10 ಸಾವಿರ ಮೆಚ್ಚುಗೆಯ ಬಹುಮಾನ ವಿರುತ್ತದೆ ಎಂದು ಆಯೋಜಕರು ತಿಳಿಸಿದರು.