ವೀರಾಜಪೇಟೆ, ಜ. 7: ಜಿಲ್ಲೆಯಾದ್ಯಂತ ಕಾಫಿ ಕುಯ್ಲು ಪ್ರಾರಂಭಗೊಂಡಿದ್ದು, ಪ್ರತಿ ಕೆ.ಜಿ. ಕಾಫಿ ಕುಯ್ಯಲು ರೂ. 2ರಂತೆ ಪಾವತಿ ಮಾಡಬಹುದಾಗಿದೆ. ಕಾಫಿ ಫಸಲು ಕಡಿಮೆ ಇದ್ದ ಪಕ್ಷದಲ್ಲಿ ರೂ. 2.50ರಂತೆ ನೀಡಬಹುದಾಗಿದೆ ಎಂದು ವೀರಾಜಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಗಣಪತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಳೆ ಇಲ್ಲದ ಕಾರಣ ಕಾಫಿ ಬೆಳೆ ಕುಂಠಿತಗೊಂಡಿದೆ. ವಾಹನಗಳಲ್ಲಿ ಕೂಲಿ ಕೆಲಸಕ್ಕೆ ಬರುವ ದಿನಗೂಲಿ ನೌಕರರು ಮನಬಂದಂತೆ ಕೂಲಿ ಕೇಳುತ್ತಿದ್ದು ತೋಟ ಮಾಲೀಕರು ಎಚ್ಚರ ವಹಿಸಬೇಕು. ಫಸಲು ಅತಿ ಕಡಿಮೆ ಇದ್ದ ಪಕ್ಷದಲ್ಲಿ ಸರ್ಕಾರ ನಿಗದಿ ಪಡಿಸಿದ 264 ರೂ. ಗಳನ್ನು ನೀಡಿ 8 ಗಂಟೆ ಕಾಲ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳುವದು ಉತ್ತಮ ಎಂದು ಹೇಳಿದ್ದಾರೆ.
ಅಮ್ಮತ್ತಿ ಪಶು ವೈದ್ಯ ಶಾಲೆಯಲ್ಲಿ ವೈದ್ಯರಿಲ್ಲದೆ ನಾಲ್ಕನೇ ದರ್ಜೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಿಯಾದ ತಿಳುವಳಿಕೆ ಇಲ್ಲದ ಸಿಬ್ಬಂದಿ ನೀಡುವ ಔಷಧಿಯಿಂದ ಪ್ರಾಣಿಗಳು ಗುಣಮುಖವಾಗುವದಿಲ್ಲ. ಕೂಡಲೇ ವೈದ್ಯಾಧಿಕಾರಿಗಳನ್ನು ನೇಮಿಸುವಂತೆ ಒತ್ತಾಯಿಸಿದರು.
ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಎಡಿಎಲ್ಆರ್, ಸೂಪರ್ವೈಸರ್ಗಳಿಲ್ಲದೆ ಸರಿಯಾದ ಸಮಯದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಪ್ರತಿಯೊಂದು ಕೆಲಸಕ್ಕೂ ಹಣ ನೀಡಬೇಕು. ತಹಶೀಲ್ದಾರರಿಗೆ ಸಿಬ್ಬಂದಿಗಳ ಮೇಲೆ ಹಿಡಿತವಿಲ್ಲದಿರುವದೇ ಮೂಲ ಕಾರಣವಾಗಿದೆ. ಜಿಲ್ಲಾಧಿಕಾರಿಗಳು ತಹಶೀಲ್ದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾನೂನು ಸಲಹೆಗಾರ ಬಿದ್ದಂಡ ಸುಬ್ಬಯ್ಯ ಮಾತನಾಡಿ ಬರಗಾಲದಿಂದ ಭತ್ತದ ಬೆಳೆ ಕುಂಠಿತಗೊಂಡಿದೆ. ಕೃಷಿ ಯಾಂತ್ರೀಕÀರಣಕ್ಕೆ ಮೊರೆಹೋದ ಕಾರಣ ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರ ಬರಗಾಲದ ನೆಪ ಒಡ್ಡಿ ಹೊರ ರಾಜ್ಯಗಳಿಗೆ ಹುಲ್ಲು ಸಾಗಾಟವನ್ನು ನಿರ್ಬಂಧಗೊಳಿಸಿದೆ. ಸರ್ಕಾರ ಒಂದು ಕ್ವಿಂಟಾಲ್ ಭತ್ತಕ್ಕೆ 1574 ಬೆಂಬಲ ಬೆಲೆ ನೀಡುತ್ತಿದೆ. ಸರ್ಕಾರ ನೀಡುವ ಬೆಂಬಲ ಬೆಲೆ 4 ಜನರ ಕೂಲಿಗೆ ಸರಿ ಸಮಾನವಾಗಿದೆ. ಕೂಡಲೆ ಸರಕಾರ ರೂ. 2200 ಬೆಂಬಲ ಬೆಲೆಯನ್ನು ಘೋಷಿಸುವಂತೆ ಆಗ್ರಹಿಸಿದರು.
ರೈತ ಸಂಘದ ಸಂಚಾಲಕ ಕೇಚಂಡ ಕುಶಾಲಪ್ಪ ಮಾತನಾಡಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದರೂ ಒಂದು ಬಿಡಿಗಾಸು ಪರಿಹಾರ ನೀಡಿಲ್ಲ. ಪರಿಹಾರದ ವಿಚಾರದಲ್ಲಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಯು.ಎಸ್ ಜಗತ್, ಖಜಾಂಜಿ ಪಿ.ಬಿ ಅರುಣ್ ಉಪಸ್ಥಿತರಿದ್ದರು.