ಗೋಣಿಕೊಪ್ಪಲು, ಆ. 30 : ಕಾಫಿ ಕಾಯ್ದೆ - 2016 ರಲ್ಲಿ ಕಾಫಿ ಬೆಳೆಗಾರರಿಗೆ ಸದಸ್ಯತ್ವ ನೀಡುವಂತೆ ಹಾಗೂ ಕಾಯ್ದೆಯಲ್ಲಿನ ನ್ಯೂನ್ಯತೆಗಳ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಕುತ್ತ್‍ನಾಡ್ ಬೇರಳಿನಾಡ್ ಬೆಳೆಗಾರರ ಸಂಘದ ವತಿಯಿಂದ ನಡೆದ ಬೆಳೆಗಾರರ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.

ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ ಕುತ್ತ್‍ನಾಡ್ ಬೆರಳಿನಾಡ್ ಬೆಳೆಗಾರರ ಸಂಘದ ಅಧ್ಯಕ್ಷ ಲಾಲಾ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಕಾಯ್ದೆಯಿಂದ ಬೆಳೆಗಾರ, ಕಾರ್ಮಿಕ ವರ್ಗ ಹಾಗೂ ವ್ಯಾಪಾರಿಗಳು ಅನುಭವಿಸುವ ತೊಂದರೆಗಳ ಬಗ್ಗೆ ಚರ್ಚಿಸಲಾಯಿತು. ಬೆಳೆಗಾರರ ಸಂಘಗಳ ಪ್ರತಿನಿಧಿಗಳು ಹಾಗೂ ತಜ್ಞರುಗಳಿಂದ ಸಲಹೆಗಳನ್ನು ಕ್ರೋಢೀಕರಿಸಿ ನಿರ್ಣಯ ತೆಗೆದು ಕೊಳ್ಳಲಾಯಿತು. ಕಾಫಿ ಕಾಯ್ದೆ - 2016 ನ್ನು ಮೊದಲ ಬಾರಿಗೆ ವೆಬ್‍ಸೈಟ್‍ನಲ್ಲಿ ಅನಾವರಣಗೊಳಿಸಿದ ಬಗ್ಗೆ ಬೆಳೆಗಾರರಿಗೆ ಮಾಹಿತಿ ಇರಲಿಲ್ಲ. ಮಾರ್ಚ್ ತಿಂಗಳಿನಲ್ಲಿ ಪ್ರಕಟಿಸಿದ ಕೇಂದ್ರ ಸರ್ಕಾರವು ಏಪ್ರಿಲ್ ಒಳಗೆ ಕಾಯ್ದೆ ವಿರುದ್ಧ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ನೀಡಿತ್ತು. ಆದರೆ, ಈ ಬಗ್ಗೆ ಸರ್ಕಾರ ಬೆಳೆಗಾರರ ಹಿತಾಸಕ್ತಿ ಕಾಯಲಿಲ್ಲ. ಬೆಳೆಗಾರರಿಗೆ ಮಾಹಿತಿ ನೀಡದೆ ಆಕ್ಷೇಪಣಾ ದಿನಾಂಕ ಕೊನೆಗೊಳ್ಳುವಂತೆ ಮಾಡಿದೆ ಎಂಬ ಆರೋಪ ವ್ಯಕ್ತವಾಯಿತು.

33 ಸದಸ್ಯ ಬಲ ಹೊಂದಿರುವ ಕಾಫಿ ಮಂಡಳಿಯನ್ನು 29 ಕ್ಕೆ ಇಳಿಸಲಾಗಿದೆ. 2 ಲೋಕಸಭಾ ಮತ್ತು 1 ರಾಜ್ಯಸಭಾ ಸದಸ್ಯರಿಗೆ ಸದಸ್ಯತ್ವಕ್ಕೆ ಅವಕಾಶ ನೀಡಲಾಗಿದೆ. ಇವರ ಆಯ್ಕೆಯನ್ನು ಕೂಡ ಲೋಕಸಭೆ ಯಲ್ಲಿಯೇ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ಕಾಫಿ ಬೆಳೆಯದ ಸಂಸದರು ಸದಸ್ಯತ್ವ ಪಡೆಯುವ ಮೂಲಕ ನೈಜ ಕಾಫಿ ಬೆಳೆಗಾರರಿಗೆ ನಷ್ಟ ಉಂಟಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಒಂದೇ ವೇದಿಕೆಯಡಿ ಹೋರಾಟ ನಡೆಸಬೇಕಿದೆ. ಆದ್ದರಿಂದ ಜಿಲ್ಲೆಯಲ್ಲಿ ಒಂದೇ ಬೆಳೆಗಾರ ಒಕ್ಕೂಟ ಅಸ್ತಿತ್ವಕ್ಕೆ ತರುವಂತೆ ಸಲಹೆಗಳು ಕೇಳಿಬಂದವು.

ಬೆಳೆಗಾರರ ಒಕ್ಕೂಟದ ಸಲಹೆಗಾರ ಚೆಪ್ಪುಡೀರ ಶರಿ ಸುಬ್ಬಯ್ಯ ಮಾತನಾಡಿ, 1942 ರ ಕಾಯ್ದೆಯನ್ನು ತಿದ್ದುಪಡಿ ತರಲು ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಲು ನೀಡಿದ್ದ ಸಮಯದಲ್ಲೂ ಬೆಳೆಗಾರರಿಗೆ ಮೋಸವಾಗಿದೆ. ಹಿಂದೆ 7 ಸಣ್ಣ ಬೆಳೆಗಾರ ಹಾಗೂ 3 ದೊಡ್ಡ ಬೆಳೆಗಾರರಿಗೆ ಸದಸ್ಯತ್ವ ಅವಕಾಶವಿತ್ತು. ಆದರೆ ಈಗಿನ 29 ಸದಸ್ಯ ಬಲದಲ್ಲಿ ಕಾಫಿ ಬೆಳೆಗಾರನಿಗೆ ಸದಸ್ಯತ್ವ ಪಡೆಯಲು ಅವಕಾಶವಿಲ್ಲ. ಈ ವಿಚಾರದಲ್ಲಿ ಹಿಂದೆ ಇದ್ದ 1942 ಕಾಫಿ ಕಾಯ್ದೆ ಬೆಳೆಗಾರನಿಗೆ ಪೂರಕವಾಗಿತ್ತು ಎಂದರು.

ಜುಲೈ 4 ಕ್ಕೆ ಗೆಜೆಟ್ ಹೊರಡಿಸಿರುವ ಸರ್ಕಾರ ಕೆಲವೊಂದು ಲೋಪಗಳನ್ನು ತೆಗೆದು ಹಾಕಿದೆ. ಕಾಫಿ ಮಂಡಳಿ ಅಧ್ಯಕ್ಷರಿಗೆ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಕಸಿದು ಕೊಂಡಿದೆ ಎಂದರು. ಇದರಿಂದಾಗಿ ಕಾಫಿ ಮಂಡಳಿಯ ಸಂಪೂರ್ಣ ಹಕ್ಕನ್ನು ಕೇಂದ್ರ ಸರ್ಕಾರ ಉಳಿಸಿಕೊಳ್ಳಲಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಸಣ್ಣ ಬೆಳೆಗಾರರ ಸಂಘದ ಉಪಾಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಮಾತನಾಡಿ, ಅಧ್ಯಕ್ಷ, ಕಾರ್ಯಾಧ್ಯಕ್ಷ ಹಾಗೂ ಉಪ ಕಾರ್ಯದರ್ಶಿ ಎಂಬ ಹುದ್ದೆಗಳನ್ನು ಈಗಿನ ಕಾಯ್ದೆಯಲ್ಲಿ ಸೇರಿಸಲಾಗಿದೆ. ಸಭೆ ನಡೆಸುವ ಅಧಿಕಾರ ಮಾತ್ರ ನೀಡುವ ಅಧಿಕಾರ ಅಧ್ಯಕ್ಷರಿಗೆ ನೀಡಿದೆ. ಇದರಿಂದ ಕಾಫಿಯಲ್ಲಿನ ನ್ಯೂನ್ಯತೆ ಸರಿಪಡಿಸಲು ಮಂಡಳಿ ವತಿಯಿಂದ ಯಾವದೇ ನಿರ್ಧಾರ ತೆಗೆದುಕೊಳ್ಳಲು ಆಗುವದಿಲ್ಲ. ಹಿಂದಿನ ಕಾಯ್ದೆಯಲ್ಲಿ ದೂರುಗಳನ್ನು ಸ್ವೀಕರಿಸಿ ಕಾರ್ಯೋನ್ಮು ಖವಾಗುವ ನಿಯಮವಿತ್ತು ಎಂದರು.

ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಕಾವೇರಪ್ಪ ಮಾತನಾಡಿ, ಆಡಳಿತಾತ್ಮಕ ಹಾಗೂ ಆರ್ಥಿಕ ನಿರ್ವಹಣೆಯ ಜವಾಬ್ದಾರಿ ಕಾರ್ಯದರ್ಶಿಯವರಿಗೆ ನೀಡುವ ಮೂಲ ಕಾಯ್ದೆಯಲ್ಲಿ ಸರ್ಕಾರ ತನ್ನಲ್ಲಿಯೇ ಅಧಿಕಾರ ಉಳಿಸಿ ಕೊಂಡಿದೆ. ಇದು ಬೆಳೆಗಾರರಿಗೆ ಆಗಿರುವ ಅನ್ಯಾಯವಾಗಿದೆ. ಕಾಫಿ ಮಂಡಳಿಯಲ್ಲಿ ನೋಂದಣಿ ಕಡ್ಡಾಯ ನೀತಿಯಿಂದ ಪಹಣಿ ಪತ್ರದಲ್ಲಿ ಪಟ್ಟೆದಾರನ ಹೆಸರು ಹಸ್ತಾಂತರ ವಾಗಬೇಕಾಗಿರುವದರಿಂದ ಶೀಘ್ರದಲ್ಲಿ ನೋಂದಣಿ ಕಾರ್ಯವಾಗುವದಿಲ್ಲ. ಇದರಿಂದ ಬೆಳೆಗಾರ ಸಮಸ್ಯೆಗೆ ಸಿಲುಕುತ್ತಾನೆ ಎಂಬ ಆತಂಕ ವ್ಯಪಡಿಸಿದರು. ಬೆಳೆಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಅಜ್ಜಮಾಡ ಶಂಕುರು ನಾಚಪ್ಪ ಮಾತನಾಡಿ, ಕಾಫಿ ಮಂಡಳಿಯ ಅಧ್ಯಕ್ಷರಿಗೆ ಆಡಳಿತಾತ್ಮಕ ಹಕ್ಕು ನೀಡದೇ ಇರುವದು ಬೆಳೆಗಾರರಿಗೆ ತೊಂದರೆಯಾಗಲಿದೆ. ಈ ಬಗ್ಗೆ ಹೋರಾಟ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಬೆಳೆಗಾರರ ಒಕ್ಕೂಟ ಇದಕ್ಕೆ ಬೆಂಬಲ ನೀಡಲಿದೆ ಎಂದು ಪ್ರಕಟಿಸಿದರು.

ಈ ಸಂದರ್ಭ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಸೋಮವಾರಪೇಟೆ ಬೆಳೆಗಾರರ ಒಕ್ಕೂಟ ಅಧ್ಯಕ್ಷ ಬಾಚಿನಾಡಂಡ ಬೋಪಣ್ಣ, ಕುತ್ತ್‍ನಾಡ್ ಬೇರಳಿನಾಡ್ ಬೆಳೆಗಾರರ ಸಂಘದ ಸಲಹೆಗಾರ ಶಂಕರಿ ಪೊನ್ನಪ್ಪ, ಕಾರ್ಯದರ್ಶಿ ಅಮ್ಮಣಿಚಂಡ ರಂಜಿ ಪೂಣಚ್ಚ ಉಪಸ್ಥಿತರಿದ್ದರು.