ಮಡಿಕೇರಿ, ಸೆ. 22: ನೂತನ ಕಾಫಿ ಕಾಯ್ದೆಯಿಂದ ಹೊಸತನ ಕಂಡುಕೊಂಡು ಕಾಫಿ ಉದ್ಯಮದ ಸಮಸ್ಯೆಗೆ ಬೆಳೆಗಾರರೇ ಪರಿಹಾರ ಕಂಡುಕೊಳ್ಳುವ ಸದಾವಕಾಶ ದೊರೆಯಲಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್‍ನ ಮಾಜಿ ಜಿಲ್ಲಾಧ್ಯಕ್ಷ ಬಿ.ಟಿ. ಪ್ರದೀಪ್ ಅವರಿಗೆ ದೇಶದಲ್ಲಿ ಕಾಫಿ ಮಾರುಕಟ್ಟೆ ಹೇಗೆ ನಡೆಯುತ್ತಿದೆ ? ಕಾಫಿ ಬೆಳೆಗಾರರಿಗೆ ಹೇಗೆ ವಂಚನೆಯಾಗುತ್ತಿದೆ ? ಸ್ಥಾಪಿತ ಹಿತಾಸಕ್ತಿಗಳು ಕಾಫಿ ಉದ್ಯಮವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ? ಕಲಬೆರಕೆ ಮಾಡಿ ಕಾಫಿ ಗುಣಮಟ್ಟವನ್ನು ಹೇಗೆ ಹಾಳು ಮಾಡುತ್ತಿದ್ದಾರೆ ಎನ್ನುವ ಅರಿವು ಇಲ್ಲದಿರುವದು ದುರಾದೃಷ್ಟಕರ.

ಒಂದು ಕಾಲದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಾಫಿ ಬಹಳ ಹೆಸರುವಾಸಿಯಾಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಾಫಿಯನ್ನು ಮುಂಗಡ ಕಾಯ್ದಿರಿಸಿ ಉಳಿದ ದೇಶದ ಕಾಫಿಗಿಂತ ರೂ. 300 ಅಧಿಕ ನೀಡಿ ಕೊಳ್ಳುತ್ತಿದ್ದರು. ಈಗ ಭಾರತದ ಕಾಫಿಯ ಬೆಲೆ ಹೇಗೆ ಇಳಿಮುಖಗೊಂಡಿದೆ, ಭಾರತದ ಕಾಫಿಯ ಬೇಡಿಕೆ ಏಕೆ ಕಡಿಮೆಯಾಗಿದೆ ಎನ್ನುವದು ಪ್ರದೀಪ್ ಅವರು ಚಿಂತಿಸಬೇಕು ಎಂದು ಸುಬ್ರಹ್ಮಣ್ಯ ಉಪಾಧ್ಯಾಯ ತಿರುಗೇಟು ನೀಡಿದರು.

ಈಗ ಭೂಮಾಫಿಯಾ ತಮ್ಮ ಕಪ್ಪು ಹಣವನ್ನು ಕಾಫಿ ತೋಟಗಳನ್ನು ಖರೀದಿ ಮಾಡಿ 1 ಎಕ್ರೆ ಕಾಫಿ ತೋಟದಲ್ಲಿ ಬೆಳೆಯುವ ಬೆಳೆ ಬಗ್ಗೆ ತಪ್ಪು ಮಾಹಿತಿ ನೀಡಿ ಎಕ್ರೆಗೆ 30 ಬ್ಯಾಗ್ ಬೆಳೆಯುವಲ್ಲಿ 90 ಬ್ಯಾಗ್ ಬೆಳೆಯುವದಾಗಿ ಮಾಹಿತಿ ನೀಡಿ ತಮ್ಮ ಕಪ್ಪು ಹಣವನ್ನು ಬಿಳಿ ಮಾಡಿಕೊಂಡು ಕಾಫಿಯ ಬೆಳೆ ಬಗ್ಗೆ ದೇಶದಲ್ಲಿ ವಾಸ್ತವ ಸ್ಥಿತಿಯನ್ನು ಮರೆಮಾಚಿ ಕಾಫಿ ಬೆಳೆಯುವ ಸಣ್ಣ ಬೆಳೆಗಾರರಿಗೆ ತೊಂದರೆಯಾಗುವಂತೆ ಮಾಡಿದ್ದಾರೆ. ಕಾಫಿ ಉದ್ಯಮದÀ ಮೇಲೆ ಸ್ಥಾಪಿತ ಹಿತಾಸಕ್ತಿಗಳ ಪ್ರಭಾವದಿಂದಾಗಿ ಸಣ್ಣ ಕಾಫಿ ಬೆಳೆಗಾರರಿಗೆ ತೊಂದರೆಯಾಗಿದೆ.

1942ರಲ್ಲಿ ಮಾಡಿದ ಕಾಫಿ ಕಾಯಿದೆ ಮತ್ತೆ ಬದಲಾವಣೆಯಾಗಿಲ್ಲ. ಈಗ ಕಾಫಿ ಉದ್ಯಮ ಬೆಳೆದಿದೆ. 1942ರ ಕಾಯ್ದೆ ಈಗ ಅನುಷ್ಠಾನವಾಗುತ್ತಿಲ್ಲ. ವ್ಯವಹಾರದ ಈಗಿನ ಪರಿಸ್ಥಿತಿಗನುಗುಣವಾಗಿ ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕಾಯ್ದೆಯನ್ನು ಹೊಸತನದಲ್ಲಿ ರೂಪುಗೊಳಿಸಿ ಕಾಫಿ ಉದ್ಯಮವನ್ನು ಬಲಪಡಿಸುವ ದೃಷ್ಟಿಯಿಂದ ದೊಡ್ಡ, ಸಣ್ಣ ಹಾಗೂ ಅತೀ ಸಣ್ಣ ಬೆಳೆಗಾರರಿಗೂ ಅವಕಾಶ ಕಲ್ಪಿಸಿ ಕಾಯ್ದೆಗೆ ಹೊಸ ರೂಪ ಕೊಡುವ ದೃಷ್ಟಿಕೋನ ಕೇಂದ್ರದಾಗಿದೆ. ಇದರಲ್ಲಿ ಮಾರುಕಟ್ಟೆಯೊಂದಿಗೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಸಮಿತಿಯಲ್ಲಿ ಈ ಹಿಂದೆ ಅಧಿಕಾರಿಗಳು ಅಧ್ಯಕ್ಷರಾಗಿದ್ದರು. ಹೊಸ ಕಾಯ್ದೆ ಪ್ರಕಾರ ಸಮಿತಿಯಲ್ಲಿ ಬೆಳೆಗಾರರೇ ಅಧ್ಯಕ್ಷರಾಗಿರುತ್ತಾರೆ. ಇದರಿಂದ ಕಾಫಿ ಉದ್ಯಮ ಹೊಸತನ ಕಂಡುಕೊಂಡು ಕಾಫಿ ಉದ್ಯಮದ ಸಮಸ್ಯೆಗಳಿಗೆ ಬೆಳೆಗಾರರೇ ಪರಿಹಾರ ಕಂಡುಕೊಳ್ಳುವ ಸದಾವಕಾಶ ದೊರೆಯಲಿದೆ ಎಂದರು.

ಕಳೆದ ಏಪ್ರಿಲ್ ತಿಂಗಳಿನಿಂದಲೇ ಜಿಲ್ಲೆಯ ಸಾರ್ವಜನಿಕರಿಗೆ, ಸಹಕಾರಿ ಸಂಘಗಳಿಗೆ, ಬೆಳೆಗಾರರಿಗೆ ಆ. 31 ರೊಳಗೆ ಅವಕಾಶ ಕಲ್ಪಿಸಲಾಗಿತ್ತು. ನೇರವಾಗಿ ಸಂಸದರು ಅಥವಾ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ಹಲವು ಪತ್ರಿಕಾಗೋಷ್ಠಿಗಳಲ್ಲಿ ಬಿಜೆಪಿಯಿಂದ ಹೇಳಲಾಗಿತ್ತು. ಈ ಪ್ರಕಾರವಾಗಿ ಜಿಲ್ಲಾ ಕೇಂದ್ರ ಬ್ಯಾಂಕ್ ಹಾಗೂ ಗ್ರಾಮೀಣ ಕೃಷಿ ಸಂಘಗಳು ತಮ್ಮಲ್ಲಿ ನಿರ್ಣಯ ಮಂಡಿಸಿ ಸಂಸದರು ಹಾಗೂ ಕೇಂದ್ರ ಸರ್ಕಾರಕ್ಕೆ ಜಿಲ್ಲೆಯಿಂದ ಕಳುಹಿಸಿದ್ದಾರೆ. ಕಾಯ್ದೆಯ ತಿದ್ದುಪಡಿಯಲ್ಲಿ ಬೆಳೆಗಾರರ, ಸಾರ್ವಜನಿಕರ, ಸಂಘ-ಸಂಸ್ಥೆಗಳ ಮನವಿ ಆಕ್ಷೇಪಣೆಗಳನ್ನು ಪರಿಗಣಿಸುವದಾಗಿ ಕೇಂದ್ರ ಸರ್ಕಾರ ಹೇಳಿದೆ. ಈ ಬಗ್ಗೆ ಪ್ರದೀಪ್‍ರಿಗೆ ಮಾಹಿತಿ ಇಲ್ಲವೆ ಎಂದು ಪ್ರಶ್ನಿಸಿದ ಅವರು ಕೊಡಗಿನ ಕಾಫಿ ಬೆಳೆಗಾರರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ರಾಜಕೀಯ ಪ್ರೇರಿತವಾಗಿದೆ.

ರೈತರ ವಿಚಾರದಲ್ಲಿ ರಾಜಕೀಯ ಮಾಡುವದು ಸರಿಯಲ್ಲ ಎಂದು ಹೇಳಿದರು.