ಗೋಣಿಕೊಪ್ಪಲು, ಜ. 4: ಕಾಪ್ಸ್ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗಿನ ಸೈನಿಕ ಶಾಲೆಯ ಪ್ರಾಂಶುಪಾಲ ಬೆನ್.ಹೆಚ್. ಬೆರ್ಸನ್ ಮಾತನಾಡಿ, ಜೀವನ ಸ್ವಯಂಚಾಲಿತ ಯಂತ್ರವಲ್ಲ, ಪರಿಪೂರ್ಣ ಜೀವನಕ್ಕೆ ಅರ್ಥಪೂರ್ಣ ಕನಸುಗಳೇ ಆಧಾರ. ಸವ್ಯಸಾಚಿಯಾದ ಆ ಕನಸುಗಳು ಸುಂದರವಾದ ಯೋಜನೆಗಳ ತಳಹದಿಯ ಮೇಲೆ ನಿಂತಿರಬೇಕು. ಉದ್ದೇಶ, ಗುರಿ, ಆದರ್ಶ, ಆತ್ಮವಿಶ್ವಾಸ ದೃಢವಾಗಿದ್ದಾಗ ಮಾತ್ರ ಸಾಧನೆಯ ಉತ್ತುಂಗವನ್ನು ತಲಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎನ್. ಬೆಳ್ಳಿಯಪ್ಪ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಾವದೇ ಸವಾಲುಗಳು ಎದುರಾದರೂ ಧೈರ್ಯದಿಂದ ಎದುರಿಸಲು ಸನ್ನದ್ಧರಾಗಿರಬೇಕು ಎಂದು ಪೆÇ್ರೀತ್ಸಾಹಿಸಿದರು.
ವಾರ್ಷಿಕ ವರದಿಯನ್ನು ಕಾಲೇಜಿನ ಪ್ರಾಂಶುಪಾಲೆ ಎನ್.ಎ. ಬೊಳ್ಳಮ್ಮ ವಾಚಿಸಿದರು. ಇದೇ ಸಂದರ್ಭ ಶೈಕ್ಷಣಿಕ ಸಾಧನೆಗಳನ್ನು ಮಾಡಿದ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಪುರಸ್ಕರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದವು.