ಮಡಿಕೇರಿ, ಆ. 24: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದ್ವೈಮಾಸಿಕ ಸಭೆಯು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಮಾಸ್ಟರ್ ಆರ್.ಕೆ.ಜಿ. ಎಂ.ಎಂ. ಮಹಾಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಉಪಸ್ಥಿತಿಯಲ್ಲಿ ನಡೆಯಿತು.
ನಗರದ ಜಿಲ್ಲಾ ನ್ಯಾಯಾಲಯ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಒಂದನೇ ಅಪರ ಸತ್ರ ನ್ಯಾಯಾಧೀಶ ಪವನೇಶ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ನ್ಯಾಯಾಧೀಶರಾದ ಟಿ.ಸಿ. ಶ್ರೀಕಾಂತ್, ಅನ್ನಪೂರ್ಣೇಶ್ವರಿ, ರಮೇಶ್ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜು, ಡಿವೈಎಸ್ಪಿ ಗಳಾದ ನಾಗಪ್ಪ, ಟಿ. ಕುಮಾರ್ ಎಸ್.ಬಿ. ಛಬ್ಬಿ, ಸರ್ಕಾರಿ ವಕೀಲ ಶ್ರೀಧರ್ ನಾಯರ್, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಮ್ತಾಜ್ ಮತ್ತಿತರರು ಭಾಗವಹಿಸಿದ್ದರು.
ಸೆಪ್ಟೆಂಬರ್ ಮೊದಲ ವಾರದಲ್ಲಿ ಅಪೌಷ್ಟಿಕತೆ ನಿವಾರಣೆ ಸಂಬಂಧ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಸಪ್ತಾಹ ಹಮ್ಮಿಕೊಳ್ಳುವದು, ಸೆಪ್ಟೆಂಬರ್ 10 ರಂದು ಮಾಸಿಕ ಲೋಕಾದಲತ್ ನಡೆಸಿ ರಾಜಿಯಾಗ ಬಹುದಾದಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶ ಮಾಡುವದು.
ವಿವಿಧ ಸಂದರ್ಭದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಸಂಬಂಧ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಕೈಜೋಡಿಸು ವಂತೆ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಸಲಹೆ ಮಾಡಿದರು.
ಜಿಲ್ಲೆಯಾದ್ಯಂತ ಪ್ರತಿ ನಗರ, ಹಳ್ಳಿ, ಗ್ರಾಮ, ಹಾಡಿ, ಶಾಲಾ, ಕಾಲೇಜುಗಳಲ್ಲಿ ಕಾನೂನಿನ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಪಂದಿಸುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್.ಕೆ.ಜಿ. ಎಂ.ಎಂ. ಮಹಾ ಸ್ವಾಮೀಜಿ ತಿಳಿಸಿದರು.
ಜಿಲ್ಲೆಯು ಬೆಟ್ಟ-ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ಜಿಲ್ಲೆಯ ಪ್ರತಿ ಗ್ರಾಮ, ಪಟ್ಟಣ ಹಾಗೂ ಹಾಡಿಗಳಲ್ಲಿ ಕಾನೂನಿನ ಬಗ್ಗೆ ಹರಿವು ಮೂಡಿಸು ವಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಈ ಬಗ್ಗೆ ಇಲಾಖೆ ಅಧಿಕಾರಿಗಳು ಕಾರ್ಯಕ್ರಮ ನಡೆಸುವಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ಕೊಡುವಂತೆ ಮಹಾಸ್ವಾಮೀಜಿ ತಿಳಿಸಿದರು.
ಈಗಾಗಲೇ ಲೋಕಾದಲತ್ನಲ್ಲಿ 705 ವಿವಿಧ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಹಾಗೂ ಮುಂದಿನ ಸೆಪ್ಟೆಂಬರ್ 10 ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುತ್ತಿದ್ದು, ರಾಜಿ ಆಗಬಹುದಾದ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಅಗತ್ಯ ಸಹಕಾರದಂತೆ ದೂರುದಾರರಿಗೆ ಮಾಹಿತಿ ಕೊಡುವಲ್ಲಿ ಪೊಲೀಸ್ ಅಧಿಕಾರಿಗಳು ಸಹಕರಿಸಬೇಕು ಎಂದರು.
ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜಾ ಮಾತನಾಡಿ ಜಿಲ್ಲೆಯಲ್ಲಿ ಹೆಚ್ಚಿನದಾಗಿ ಗ್ರಾಮೀಣ ಪ್ರದೇಶದವರು ಇದ್ದಾರೆ ಅದರಲ್ಲೂ ಕುಗ್ರಾಮ ಹಾಗೂ ಹಾಡಿಗಳ ಜನರಿಗೆ ಕಾನೂನಿನ ಅರಿವು ಮತ್ತು ಸಲಹೆ ದೊರೆಯಬೇಕಿದೆ ಎಂದರು. ಅರಣ್ಯವಾಸಿ ಅಥವಾ ಹಾಡಿಗಳಲ್ಲಿ ವಾಸಿಸುವ ಜನರಿಗೆ ಇಲಾಖೆಯ ಸೌಲಭ್ಯಗಳನ್ನು ತಿಳಿಸುವದರ ಜೊತೆಗೆ ಕಾನೂನಿಡಿಯಲ್ಲಿರುವ ಸೇವೆಗಳ ಪರಿಚಯ ಸಿಗಬೇಕಿದೆ ಎಂದು ಸಲಹೆ ಮಾಡಿದರು.