ಸೋಮವಾರಪೇಟೆ, ಜು. 25: ತಾಲೂಕು ಕಾನೂನು ಸೇವಾಸಮಿತಿ, ಅರಣ್ಯ ಇಲಾಖೆ, ವಕೀಲರ ಸಂಘದ ಆಶ್ರಯದಲ್ಲಿ ನೇರುಗಳಲೆ ಪ್ರೌಢಶಾಲೆಯಲ್ಲಿ ಕಾನೂನು ಶಿಬಿರ ಮತ್ತು ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಇಲ್ಲಿನ ಜೆಎಂಎಫ್‍ಸಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಒಂದು ಲಕ್ಷಕ್ಕೆ ಮೀರದ ಆದಾಯ ಹೊಂದಿದ ಬಡವರಿಗೆ, ಮಹಿಳೆಯರಿಗೆ, ಗಲಭೆ ಮುಂತಾದ ಕಡೆಗಳಲ್ಲಿ ಹಾನಿಗೊಳಗಾದವರಿಗೆ ಉಚಿತ ಕಾನೂನು ನೆರವನ್ನು ಒದಗಿಸಲಾಗುತ್ತದೆ. ಉಚಿತ ಕಾನೂನು ಸೇವಾ ಪ್ರಾಧಿಕಾರದಿಂದ ದೇಶದ ಎಲ್ಲಾ ನ್ಯಾಯಾಲಯಗಳಲ್ಲೂ ಫಲಾನುಭವಿಗಳಿಗೆ ನೆರವು ದೊರೆಯಲಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಉಚಿತ ಕಾನೂನು ನೆರವಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ವಿದ್ಯಾರ್ಥಿಗಳ ಕಾನೂನಿನ ಅರಿವು ಪಡೆದುಕೊಳ್ಳಬೇಕು ಎಂದು ಹೇಳಿದರು. ಬಾಲ್ಯ ವಿವಾಹ ನಿಷೇಧ ಕಾಯಿದೆ ಬಗ್ಗೆ ವಕೀಲ ಎನ್.ಡಿ.ಅರುಣ್, ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಬಗ್ಗೆ ವಕೀಲ ಎಸ್.ಎಸ್. ಮನೋಹರ್ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ತಿಮ್ಮಯ್ಯ ವಹಿಸಿದ್ದರು. ಎಸಿಎಫ್ ಭಾಸ್ಕರ್, ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ ಉಪಸ್ಥಿತರಿದ್ದರು. ವನಮಹೋತ್ಸವ ಪ್ರಯುಕ್ತ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.