ವೀರಾಜಪೇಟೆ, ಜು. 29: ಯಾವದೇ ಇಲಾಖೆಗಳಿಗೆ ಜನರು ಸಲ್ಲಿಸಿದ ಅರ್ಜಿಗಳನ್ನು ಸ್ಥಳದಲ್ಲೇ ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕು ಎಂದು ಕೊಡಗು ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ ಅಧಿಕಾರಿಗಳಿಗೆ ಆದೇಶಿಸಿದರು.
ವೀರಾಜಪೇಟೆ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸ ಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಜನರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಲು ಸಾಧ್ಯವಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ ಪ್ರತಿ ತಿಂಗಳು ಜನ ಸಂಪರ್ಕಸಭೆ ನಡೆಸಿ ಜನರ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು ಎಂದರು.
ಶ್ರೀಮಂಗಲದ ರೈತ ಸಂಘದ ಚಿಮ್ಮಂಗಡ ಗಣೇಶ್ ಗಣಪತಿ ಮಾತನಾಡಿ, ಈ ರೀತಿ ಸಭೆಗಳನ್ನು ಆಯೋಜಿಸಿರುವದು ಉತ್ತಮ ಕಾರ್ಯ ಆದರೆ ಹೋಬಳಿ ಮಟ್ಟದಲ್ಲಿಯು ಸಭೆಗಳನ್ನು ನಡೆಸಿದರೆ ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ದೊರಕಲು ಸಾಧ್ಯ ಎಂದಾಗ ಮುಂದಿನ ದಿನದಲ್ಲಿ ಪ್ರಯತ್ನಿಸುವದಾಗಿ ಉಪವಿಭಾಗಾಧಿಕಾರಿ ತಿಳಿಸಿದರು.
ಕೆದಮುಳ್ಳೂರಿನ ಚೋಟು ಬಿದ್ದಪ್ಪ ಮಾತನಾಡಿ, ಮುಂದೆ ಈ ರೀತಿ ಸಭೆಗಳನ್ನು ನಡೆಸುವಾಗ ಗ್ರಾಮೀಣ ಪ್ರದೇಶದ ಜನರಿಗೆ ಸಭೆಯ ಮಾಹಿತಿ ನೀಡಬೇಕು. ಹಾಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಮಗಳಲ್ಲಿ ಕಳೆದ ವರ್ಷ ಕುಡಿಯುವ ನೀರಿಗಾಗಿ ತೆರೆದ ಬಾವಿ ನಿರ್ಮಿಸಿ ಇನ್ನೂ ಕೆಲವು ಅರ್ಧದಲ್ಲೇ ನಿಂತಿವೆ ಎಂದರು. ಕಾನೂರಿನ ನರೇಂದ್ರ ಅವರು ಮಾತನಾಡಿ, ರೈತರ ಬೆಳೆಹಾನಿ ಪರಿಹಾರದ ಬಗ್ಗೆ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ರೈತರಿಗೆ ಯಾವದೇ ಸವಲತ್ತುಗಳು ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್. ಫಡ್ನೇಕರ್ ಮಾತನಾಡಿ, ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಜನರ ಮನೆ ಬಾಗಿಲಿಗೆ ತಲಪುವಂತಹ ಯೋಜನೆಗಳನ್ನು ಹಾಕಿಕೊಂಡಿದೆ. ಮೊದಲು ಸರ್ಕಾರದ ಎಲ್ಲಾ ಯೋಜನೆಗಳು ತಾಲೂಕು ಮಟ್ಟದಲ್ಲಿ ಬರುತ್ತಿತ್ತು. ಆದರೆ ನೇರವಾಗಿ ಈಗ ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಿದೆ ಎಂದು ಹೇಳಿದರು.
ಸಭೆಯಲ್ಲಿ ತಾಲೂಕು ತಹಶೀಲ್ದಾರ್ ಮಹದೇವಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಡಿ.ವೈ.ಎಸ್.ಪಿ. ನಾಗಪ್ಪ, ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು, ಎ.ಸಿ.ಎಫ್. ಚಿಕ್ಕರಾಜೇಂದ್ರ, ಸರ್ಕಲ್ ಇನ್ಸ್‍ಪೆಕ್ಟರ್ ಶಾಂತಮಲ್ಲಪ್ಪ, ಸಿ.ಎನ್. ದಿವಾಕರ್, ಠಾಣಾಧಿಕಾರಿ ಜಿ.ಕೆ. ಸುಬ್ರಮಣ್ಯ, ಶಿರಸ್ತೇದಾರ್ ಪೊನ್ನು, ಕಂದಾಯ ಪರಿವೀಕ್ಷಕ ಹೆಚ್.ಕೆ. ಶಿವಪ್ಪ, ಸೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಆಹಾರ ಇಲಾಖೆ, ಸರ್ವೆ ಸೇರಿದಂತೆ ಇಲಾಖೆ, ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.