ಮಡಿಕೇರಿ, ಜ. 8: ಶ್ರೀಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವಲ್ಲಿ ವಕೀಲರ ಪಾತ್ರ ಮಹತ್ತರವಾಗಿದ್ದು, ಆ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಕಾನೂನು ಅರಿವು ನೀಡುವಲ್ಲಿ ಇನ್ನಷ್ಟು ಸಹಕರಿಸಬೇಕಿದೆ ಎಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಆರ್.ಕೆ.ಜಿ. ಎಂ.ಎಂ. ಮಹಾಸ್ವಾಮೀಜಿ ಸಲಹೆ ಮಾಡಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘದ ವತಿಯಿಂದ ನಗರದ ನ್ಯಾಯಾಲಯ ಸಭಾಂಗಣದಲ್ಲಿ ಕಾನೂನು ಸೇವೆ ಕುರಿತು ಪುನರ್ ಮನನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರಲ್ಲಿ ಕಾನೂನಿನ ಬಗ್ಗೆ ಅರಿವು ಉಂಟುಮಾಡುವದು, ಕಾನೂನು ಸಾಕ್ಷರತೆ, ಉಚಿತ ಕಾನೂನು ನೆರವು ಮತ್ತು ಸಲಹೆಯನ್ನು ಕೊಡುವದು, ಜನತಾ ನ್ಯಾಯಾಲಯಗಳ ಮೂಲಕ ಪ್ರಕರಣಗಳನ್ನು ಶೀಘ್ರವಾಗಿ ಕಡಿಮೆ ಖರ್ಚಿನಲ್ಲಿ ಇತ್ಯರ್ಥಗೊಳಿಸುವದು, ಖಾಯಂ ಜನತಾ ನ್ಯಾಯಾಲಯಗಳ ಮೂಲಕ (ಪಿ.ಎಲ್.ಎ) ಕೆಲವು ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ವಿವಾದಗಳ ಇತ್ಯರ್ಥ ಹಾಗೂ ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಸಂಧಾನ ವ್ಯವಸ್ಥೆ ಮತ್ತು ಪರ್ಯಾಯ ವ್ಯಾಜ್ಯ ಪರಿಹಾರದ ವ್ಯವಸ್ಥೆ ಮಾಡುವದು ಕಾನೂನು ಸೇವಾ ಪ್ರಾಧಿಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಸೋಮವಾರಪೇಟೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ, ದೇಶವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದೆ. ಕಾನೂನಿನಿಂದ ವಂಚಿತರಾದವರಿಗೆ ಕಾನೂನು ಸೇವೆ ನೀಡುವದು ಕಾನೂನು ಸೇವಾ ಪ್ರಾಧಿಕಾರದ ಆದ್ಯತೆಯಾಗಿದ್ದು, ನ್ಯಾಯಾಧೀಶರು ಹಾಗೂ ಹಿರಿಯ ನ್ಯಾಯವಾಧಿಗಳ ಮಾರ್ಗದರ್ಶನ ಪಡೆದು ಕಿರಿಯ ವಕೀಲರು ವೃತ್ತಿಯಲ್ಲಿ ಯಶಸ್ಸು ಗಳಿಸುವತ್ತ ಮುನ್ನಡೆಯಬೇಕು ಎಂದು ಸಲಹೆ ಮಾಡಿದರು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್ ಮಾತನಾಡಿ, ವಕೀಲರು ಉತ್ಸಾಹ ದಿಂದ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ವಕೀಲ ವೃತ್ತಿಗೆ ಬರುವವರಿಗೆ ಆರ್ಥಿಕ ಸಹಕಾರ ದೊರೆಯುವಂತಾಗಬೇಕು ಎಂದು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಡಿ. ಪವನೇಶ್, ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಸಿ. ಶ್ರೀಕಾಂತ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಬಿ.ಎನ್. ರಮೇಶ್ ಬಾಬು, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು, ವಕೀಲರಾದ ಬಾಲಸುಬ್ರಮಣ್ಯ, ಎಂ.ಎ. ನಿರಂಜನ, ಮನೋಜ್ ಬೋಪಯ್ಯ, ಎಂ.ಎಸ್. ಬಿದ್ದಪ್ಪ, ಕೆ.ಎಸ್. ತಮ್ಮಯ್ಯ ಇತರರು ಇದ್ದರು.
ವಕೀಲರ ಸಂಘದ ಕಾರ್ಯ ದರ್ಶಿ ಪಿ.ಯು. ಪ್ರೀತಂ ಸ್ವಾಗತಿಸಿ, ಜಯಪ್ಪ ನಿರೂಪಿಸಿ, ದಯಾ ಚಂಗಪ್ಪ ಪ್ರಾರ್ಥಿಸಿ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಡಿ. ದಯಾನಂದ ವಂದಿಸಿದರು.