ಮಡಿಕೇರಿ, ಜು. 20: ಕಾಡಾನೆಗಳ ನಡುವೆ ನಡೆದ ತೀವ್ರ ಹೋರಾಟಕ್ಕೆ ಅಗೆ ಗದ್ದೆಗಳು ರಣಾಂಗಣವಾಗಿ ಬೆಳೆಗಾರರಿಗೆ ನಷ್ಟ ಸಂಭವಿಸಿದ ಘಟನೆ ಮಾಯಮುಡಿ ಪಂಚಯಿತಿ ವ್ಯಾಪ್ತಿಯ ಬಾಳಾಜಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದ ಬೆಳೆನಾಶ ಹಾಗೂ ಆನೆ ಹಾವಳಿಯಿಂದ ಫಸಲು ನಷ್ಟವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಬಾಳಾಜಿ ಗ್ರಾಮದ ಸಣ್ಣುವಂಡ ಚಿಣ್ಣಪ್ಪ ಅವರ ಪುತ್ರ ಪೊನ್ನಣ್ಣ ಎಂಬವರು ತಮ್ಮ ಗದ್ದೆಗಳ ನಾಟಿ ಕಾರ್ಯಕ್ಕಾಗಿ ಎರಡು ಅಗೆ ಗದ್ದೆಗಳಲ್ಲಿ ಭತ್ತ ಬೀಜ ಬಿತ್ತನೆ ಮಾಡಿದ್ದು, ಬಿತ್ತನೆ ಮಾಡಿ ಕೇವಲ ಆರು ದಿನಗಳ ಅಂತರದಲ್ಲಿ ಅದೇ ಅಗೆ ಗದ್ದೆಗಳಲ್ಲಿ ಕಾಡಾನೆಗಳ ಗುಂಪುಗಳ ನಡುವೆ ಹೋರಾಟ ನಡೆದಿದ್ದು, ಸಸಿ ಮಡಿಗಳು ನೆಲಕಚ್ಚಿವೆ. ಈ ಸಾಲಿನಲ್ಲಿ ಗದ್ದೆ ನಾಟಿಯೇ ಮಾಡಲಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.