ಸುಂಟಿಕೊಪ್ಪ, ಜು. 6: ಸುಂಟಿಕೊಪ್ಪ ಸುತ್ತಮುತ್ತಲಿನ ತೋಟಗಳಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರು ಬೆಳೆದ ಕೃಷಿ ಫಸಲುಗಳನ್ನು ತಿಂದು ಧ್ವಂಸಗೊಳಿಸುತ್ತಿದೆ ಎಂದು ಬಿ. ಎನ್ ಉತ್ತಪ್ಪ ನೋವನ್ನು ತೋಡಿಕೊಂಡರು.

ಇಲ್ಲಿಗೆ ಸಮೀಪದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ತೋಟಗಳಿಗೆ ಲಗ್ಗೆಯಿಟ್ಟಿದ್ದು, ಅಪಾರ ಬೆಳೆ ನಷ್ಟ ಸಂಭವಿಸುತ್ತಿದೆ. ಕೊಡಗರಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಂದಗೋವೆ ಗ್ರಾಮದ ಬಿ. ಎನ್ ಉತ್ತಪ್ಪ ಎಂಬವರಿಗೆ ಸೇರಿದ 5 ಎಕರೆ ಜಾಗದಲ್ಲಿ ಬೆಳೆದ ಮರಗೆಣಸು, ಕೇನೆ, ಕೆಸ ಇನ್ನಿತರ ಬೆಳೆಗಳನ್ನು ತಿಂದು ನಾಶಗೊಳಿಸಿವೆ. ಇದರಿಂದ ಅಂದಾಜು ಸುಮಾರು ರೂ. ಒಂದೂವರೆ ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಅಲ್ಲದೇ ಇಲ್ಲಿನ ಸುತ್ತಮುತ್ತಲಿನ ತೋಟಗಳಿಗೂ ಆನೆಗಳ ಹಿಂಡು ಲಗ್ಗೆಯಿಡುತ್ತಿದ್ದು ಅಪಾರ ಬೆಳೆ ನಾಶಗೊಳಿಸುತ್ತಿವೆ.

ಈ ಬಗ್ಗೆ ಮಾಹಿತಿ ನೀಡಿದ ಈ ಭಾಗದ ಗ್ರಾಮಸ್ಥರು, ನಿರಂತರವಾಗಿ ಕಾಡಾನೆಗಳು ಪ್ರತ್ಯಕ್ಷವಾಗುತ್ತಿದ್ದು ಮನೆಯಿಂದ ಹೊರ ಬರುವದಕ್ಕೂ ಭೀತಿಪಡುವಂತಾಗಿದೆ ಬೆಳಗ್ಗಿನ ವೇಳೆಯಲ್ಲಿ ರಸ್ತೆಯ ಬದಿಯಲ್ಲೇ ಆನೆಗಳು ಓಡಾಡುತ್ತಿರುವದರಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ತೋಟದ ಕಾರ್ಮಿಕರಿಗೆ ಸುಂಟಿಕೊಪ್ಪದತ್ತ ಬರುವದಕ್ಕೆ ಕಷ್ಟಪಡುವಂತಾಗಿದೆ. ಅರಣ್ಯ ಇಲಾಖೆಯವರು ಆನೆಗಳನ್ನು ಈ ಭಾಗದಿಂದ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಅನಾಹುತ ತಪ್ಪಿಸಬೇಕೆಂದು ಆಗ್ರಹಿಸಿದರು.

ಹರದೂರು ಜಿ.ಎಲ್. ರಮೇಶ್ ಎಂಬವರ ತೋಟಕ್ಕೆ ನುಗ್ಗಿದ್ದ ಕಾಡಾನೆಗಳ ಹಿಂಡು ಬಾಳೆ, ಪರಂಗಿ ಹಣ್ಣು, ಕಾಫಿ, ಏಲಕ್ಕಿ ಇನ್ನಿತರ ಕೃಷಿಫಸಲುಗಳನ್ನು ತಿಂದು ನಾಶಗೊಳಿಸಿರುವ ಕುರಿತು ವರದಿಯಾಗಿದೆ.

ನೆಟ್ಲಿ ಎ., ಪನ್ಯ, ಹರದೂರು ತೋಟಗಳಿಗೆ 5 ಕಾಡಾನೆಗಳ ಹಿಂಡು ಮಧ್ಯರಾತ್ರಿ ವೇಳೆ ಜಿ.ಎಲ್. ರಮೇಶ್ ಅವರ ತೋಟಕ್ಕೆ ಆಹಾರ ಅರಸಿಬಂದ ಕಾಡಾನೆಗಳು ತೋಟದಲ್ಲಿ ಬೆಳೆಸಲಾದ ಬಾಳೆ, ಹಲಸು, ಪರಂಗಿಹಣ್ಣು, ಕಾಫಿ ಏಲಕ್ಕಿ ಸೇರಿದಂತೆ ಬಿದಿರುಗಳನ್ನು ತಿಂದು ನಾಶಪಡಿಸಿವೆ. ಕಾಡಾನೆಗಳ ಹಿಂಡಿನಲ್ಲಿ ಮರಿಯಾನೆ ಇರುವದರಿಂದ ಪುಂಡಾಟಿಕೆಯನ್ನು ತೋರಿದ್ದು ಕಾಡಾನೆಗಳ ಪುಂಡಾಟಕ್ಕೆ ತೋಟದಲ್ಲಿ ಫಸಲು ಭರಿತ ರೋಬಸ್ಟ ಕಾಫಿಗಿಡಗಳು, ಸಿಲ್ವರ್ ಮರಗಳನ್ನು, ನೆಲಕ್ಕುರುಳಿಸಿದ್ದಲ್ಲದೆ ತೋಟದ ಲೈನ್ ಮನೆಯ ಸಮೀಪಕ್ಕೆ ತೆರಳಿದ ಕಾಡಾನೆಗಳ ಹಿಂಡು ಮರವನ್ನು ಬೀಳಿಸಿ ಗೋದಾಮಿನ ಮೇಲ್ಛಾವಣಿ ಹೆಂಚುಗಳನ್ನು ಧ್ವಂಸಗೊಳಿಸಿವೆ. ಇದರಿಂದ ಜಿ.ಎಲ್. ರಮೇಶ್ ರವರಿಗೆ ಅಂದಾಜು ಮೌಲ್ಯ ರೂ 50,000ಕ್ಕೂ ಮಿಕ್ಕಿ ನಷ್ಟ ಉಂಟಾಗಿರುವ ಬಗ್ಗೆ ನೋವನ್ನು ತೋಡಿಕೊಂಡರು.