ಸೋಮವಾರಪೇಟೆ, ಜು.22: ಕಾಡಾನೆಗಳ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಇದರಿಂದಾಗಿ ರೈತರ ಹಾಗೂ ಕೂಲಿ ಕಾರ್ಮಿಕರ ಜೀವಹರಣವಾಗುವದರೊಂದಿಗೆ ಕೃಷಿ ಫಸಲು ನಷ್ಟವಾಗುತ್ತಿದೆ ಎಂದು ಜನಪರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಮಣಿ ಉತ್ತಪ್ಪ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ತಿಂಗಳ ಹಿಂದೆ ಭೂತನಕಾಡಿನಲ್ಲಿ ಅಮೀನ ಎಂಬ ಕಾರ್ಮಿಕ ಮಹಿಳೆ ಕಾಡಾನೆ ಧಾಳಿಗೆ ಬಲಿಯಾಗಿದ್ದಾರೆ. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಸ್ಥಳಕ್ಕಾಗಮಿಸಿದ ಸಂದರ್ಭ, ಚೆಟ್ಟಳ್ಳಿ ಹಾಗೂ ಕೆದಕಲ್ ಗ್ರಾಮ ಪಂಚಾಯಿತಿ ಗ್ರಾಮಸ್ಥರು, ಮೃತರ ಕಟುಂಬಕ್ಕೆ ಸರ್ಕಾರದ ನೆರವನ್ನು ನೀಡಬೇಕು ಎಂದು ಆಗ್ರಹಿಸಿದ್ದರೂ ಇದುವರೆಗೂ ಯಾವದೇ ಪರಿಹಾರ ಕಂಡಿಲ್ಲ ಎಂದು ದೂರಿದರು.

ಈ ಭಾಗದಲ್ಲಿ ರಸ್ತೆ ಬದಿಯ ಕಾಡು ಬೆಳೆದು ಕಾಡಾನೆಗಳು ನಿಲ್ಲುವದು ಜನರಿಗೆ ಕಾಣುವದಿಲ್ಲ. ಇದರಿಂದಾಗಿ ಜನರು ಕಾಡಾನೆಗಳ ಧಾಳಿಗೆ ತುತ್ತಾಗಬೇಕಾಗಿದೆ. ಕೂಡಲೇ 15 ಅಡಿ ಎತ್ತರದವರೆಗಿನ ಕಾಡನ್ನು ಕಡಿದು ಸ್ವಚ್ಛಗೊಳಿಸುವಂತೆ ಮನವಿ ಮಾಡಲಾಗಿತ್ತು. ಅಧಿಕಾರಿಗಳು ನೆರವೇರಿಸುವ ಭರವಸೆ ನೀಡಿ ಹೋಗಿದ್ದು, ಈವರೆಗೆ ಮೃತ ಕುಟುಂಬಕ್ಕೆ ಸರ್ಕಾರದ ನೆರವನ್ನು ನೀಡಿಲ್ಲ ಹಾಗೂ ಕಾಡು ಕಡಿಸುವ ಕೆಲಸ ಮಾಡಿಲ್ಲ ಎಂದು ದೂರಿದರು. ಮುಂದಿನ ಎರಡು ದಿನಗಳ ಒಳಗೆ ಕಾಡನ್ನು ಕಡಿದು ಸ್ವಚ್ಛಗೊಳಿಸದಿದ್ದಲ್ಲಿ ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ಎಚ್ಚರಿಸಿದರು.

ಅರಣ್ಯಾಧಿಕಾರಿಗಳ ತೀವ್ರ ನಿರ್ಲಕ್ಷ್ಯದಿಂದಾಗಿ ಕಾಡಾನೆಗಳು ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಹಾವಳಿ ನಡೆಸುತ್ತಿವೆ. ಅಧಿಕಾರಿಗಳು ಬೃಹತ್ ಕಾಫಿ ತೋಟಗಳ ಸುತ್ತ ಸೋಲಾರ್ ತಂತಿಯನ್ನು ಅಳವಡಿಸುತ್ತಿರುವದರಿಂದ ಕಾಡಾನೆಗಳ ಮಾರ್ಗ ಬಂದ್ ಆಗುತ್ತಿರುವ ಹಿನ್ನೆಲೆ ಸಮಸ್ಯೆ ಹೆಚ್ಚಾಗಿದೆ. ಮೊದಲು ಸೋಲಾರ್ ತಂತಿ ಅಳವಡಿಸುವದನ್ನು ಇಲಾಖೆ ನಿಲ್ಲಿಸಬೇಕು. ಕಾಡುಗಳಲ್ಲಿ ಈ ಹಿಂದೆ ಇದ್ದ ಕೆರೆಗಳ ಹೂಳೆತ್ತುವ ಮೂಲಕ ಆನೆಗಳಿಗೆ ಕಾಡಿನಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇದರೊಂದಿಗೆ ನೂತನವಾಗಿ ಕೆರೆಗಳನ್ನು ತೆಗೆಸುವದರೊಂದಿಗೆ, ಮೇವಿನ ಗಿಡಗಳನ್ನು ನೆಟ್ಟು ಆಹಾರದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.