ಸುಂಟಿಕೊಪ್ಪ, ಸೆ. 2: ಸುಂಟಿಕೊಪ್ಪ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರುತ್ತಿದ್ದು, ಗ್ರಾಮಸ್ಥರು ಆತಂಕದ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ.

ಇಲ್ಲಿಗೆ ಸಮೀಪದ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಗೆ ಸೇರಿದ ಎಮ್ಮೆಗುಂಡಿ ಎಂಬಲ್ಲಿ ಭತ್ತದ ಗದ್ದೆಯಲ್ಲಿಯೇ ಕಾಡಾನೆಗಳ ಹಿಂಡು ರಾತ್ರಿಯಿಡೀ ಬೀಡುಬಿಡುತ್ತಿದ್ದು, ಫಸಲು ನಷ್ಟದ ಜೊತೆಯಲ್ಲಿ ಗ್ರಾಮಸ್ಥರು ತಮ್ಮ ಹೊಲ, ಗದ್ದೆಗಳಿಗೆ ಹೋಗುವದಕ್ಕೂ ಭಯಪಡುವಂತಾಗಿದೆ.

ಎಮ್ಮೆಗುಂಡಿ ನಿವಾಸಿಗಳಾದ ಐತಪ್ಪ ಪೂಜಾರಿ ಮತ್ತು ಸಂಕಪ್ಪ ಪೂಜಾರಿ ಎಂಬವರ ಗದ್ದೆಗಳಿಗೆ ಲಗ್ಗೆಯಿಟ್ಟು ಬೆಳೆದು ನಿಂತ ಭತ್ತದ ಪೈರುಗಳನ್ನು ತಿಂದು ಹಾಕಿದಲ್ಲದೇ, ಆನೆಗಳು ಈ ಗದ್ದೆಯಲ್ಲಿ ನಡೆದಾಡಿದ್ದರಿಂದ ಆ ಭಾಗ ಸಂಪೂರ್ಣವಾಗಿ ನಾಶವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಶೀಘ್ರ ಪರಿಹಾರಕ್ಕೆ ಮನವಿ ಮಾಡಿದ್ದಾರೆ.