ಶ್ರೀಮಂಗಲ, ಸೆ. 27: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆಗಾಗಿ ರಾಜ್ಯ ಸರಕಾರ ರೂ. 234 ಕೋಟಿಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದೆ. ಅರಣ್ಯ ಸರಹದ್ದಿನಲ್ಲಿ ಗ್ರಾಮಗಳಿಗೆ ಕಾಡಾನೆಗಳು ನುಗ್ಗದಂತೆ ರೈಲ್ವೆ ಕಂಬಿಗಳ ಬೇಲಿ, ಆನೆ ಚರಂಡಿ ಇತ್ಯಾದಿಗಳು ಈ ಯೋಜನೆಯಲ್ಲಿ ಸೇರಿದೆ ಎಂದು ಮಡಿಕೇರಿ ವನ್ಯಜೀವಿ ವಲಯದ ಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ಜಯಾ ವಿವರಣೆ ನೀಡಿದರು.
ಶ್ರೀಮಂಗಲದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಯೋಜನೆ ರೂಪಿಸಲಾಗಿದೆ. ಮಡಿಕೇರಿ ವನ್ಯ ಜೀವಿ ವ್ಯಾಪ್ತಿಯಲ್ಲಿ ನಾಲ್ಕು ವಲಯ ಅರಣ್ಯಾಧಿಕಾರಿಗಳಲ್ಲಿ 2 ಹುದ್ದೆ ಖಾಲಿ ಇದೆ. 9 ಫಾರೆಸ್ಟರ್‍ಗಳಲ್ಲಿ 5 ಖಾಲಿ ಇದೆ. 29 ಅರಣ್ಯ ರಕ್ಷಕರಲ್ಲಿ 14 ಖಾಲಿ ಇದೆ. ಆದ್ದರಿಂದ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸಿಬ್ಬಂದಿಗಳ ಕೊರತೆಯೂ ಸಮಸ್ಯೆಯಾಗಿದೆ. ಗುತ್ತಿಗೆ ಆಧಾರದಲ್ಲಿ ಅರಣ್ಯ ಸಿಬ್ಬಂದಿಗಳನ್ನು ಇಲಾಖೆ ನೇಮಿಸಿಕೊಂಡಿದೆ ಎಂದರು.
ಗುತ್ತಿಗೆ ಆಧಾರದಲ್ಲಿ ದಿನಗೂಲಿ ನೌಕರರ ವೇತನವನ್ನು ಇದುವರೆಗೆ ಕೇಂದ್ರ ಸರಕಾರದ ನಿಧಿಯಿಂದ ನೀಡಲಾಗುತ್ತಿತ್ತು. ಇನ್ನು ಮುಂದೆ ರಾಜ್ಯ (ಮೊದಲ ಪುಟದಿಂದ) ಸರಕಾರದಿಂದ ನೀಡಲು ನಿರ್ಧರಿಸಲಾಗಿದ್ದು, ಇದರಿಂದ ವೇತನ ಪಾವತಿ ವಿಳಂಬವಾಗುವದಿಲ್ಲ, ಖಜಾನೆ 2ರ ಮೂಲಕ ವೇತನ ನೇರವಾಗಿ ದಿನಗೂಲಿ ನೌಕರರ ಖಾತೆಗೆ ಪಾವತಿಯಾಗಲಿದೆ ಎಂದು ಹೇಳಿದರು.
ಕಾಡಾನೆ ನುಸುಳದಂತೆ ಅರಣ್ಯದಂಚಿನಲ್ಲಿ ಮಳೆಗಾಲದಲ್ಲಿ ನಿಲ್ಲಿಸಿದ್ದ ಕಾಮಗಾರಿಗಳನ್ನು ಮತ್ತೆ ಕೈಗೆತ್ತಿಕೊಳ್ಳಲಾಗುವದು. ಅವಶ್ಯವಿದ್ದಲ್ಲಿ ರೈಲ್ವೆ ಕಂಬಿಗಳ ಮೂಲಕ ಬೇಲಿ ನಿರ್ಮಿಸಲಾಗುವದು. ಇಂತಹ ಕಾಮಗಾರಿಗಳಲ್ಲಿ ಕಳಪೆ ಕಂಡು ಬಂದರೆ ಅಧಿಕಾರಿಗಳ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಈಗಾಗಲೆ ಸರಕಾರ ವನ್ಯ ಪ್ರಾಣಿಗಳಿಂದ ಬೆಳೆ ಹಾನಿಗೆ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿದೆ. ಆದರೆ ಇದರಲ್ಲಿ ಸಾಕು ಪ್ರಾಣಿಗಳ ಪ್ರಾಣ ಹಾನಿ ಹಾಗೂ ಗಾಯಗೊಂಡದಕ್ಕೆ ಸೇರಿಸಿಲ್ಲ. ಈ ಬಗ್ಗೆ ಪ್ರತ್ಯೇಕವಾದ ಪಟ್ಟಿ ಸಲ್ಲಿಕೆಯಾಗಿರುವದರಿಂದ ಸದÀ್ಯದಲ್ಲಿಯೇ ಅದು ಸಹ ಪರಿಷ್ಕರಣೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಡಾನೆಗಳ ಕಾರ್ಯಾಚರಣೆ ಕೈಗೊಳ್ಳಲು ಈಗಾಗಲೇ ಮೂರು ತಂಡಗಳು ಇವೆ. ಖಾಯಂ ಸಿಬ್ಬಂದಿಗಳ ನೇಮಕಕ್ಕೆ ರಾಜ್ಯ ಮಟ್ಟದಲ್ಲಿ ಪ್ರಯತ್ನ ಸಾಗಿದೆ. ವನ್ಯಪ್ರಾಣಿಗಳ ಹಾವಳಿ ನಿಯಂತ್ರಣ ಸೇರಿದಂತೆ ಅರಣ್ಯ ಸಂರಕ್ಷಣೆಗೆ ಇಲಾಖೆಯೊಂದಿಗೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಜನರ ಸಹಕಾರ ಅಗತ್ಯವಾಗಿದೆ. ಅರಣ್ಯದೊಳಗೆ ವನ್ಯಪ್ರಾಣಿಗಳಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಪ್ರಸಕ್ತ ಮಳೆಗಾಲದಲ್ಲಿ 500 ಕೆ.ಜಿ. ಯಷ್ಟು ಬಿದಿರು, ಹೊಂಗೆ ಇತ್ಯಾದಿ ಬೀಜವನ್ನು ಬಿತ್ತಲಾಗಿದೆ ಎಂದು ಹೇಳಿದರು.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಅರಣ್ಯ ಸಿಬ್ಬಂದಿಗಳಿಗೆ ಪಾದರಕ್ಷೆ, ರೈನ್‍ಕೋಟ್ ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುವದು ಎಂದು ಹೇಳಿದರು.
ಈ ಸಂದರ್ಭ ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಂಕರು ನಾಚಪ್ಪ, ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಜಿ.ಪಂ. ಸದಸ್ಯ ಶಿವು ಮಾದಪ್ಪ, ತಾ.ಪಂ. ಸದಸ್ಯರಾದ ಪಲ್ವೀನ್ ಪೂಣಚ್ಚ, ಸರೋಜ, ಗ್ರಾ.ಪಂ ಸದಸ್ಯ ಚೋನೀರ ಕಾಳಯ್ಯ, ಪ್ರಮುಖರಾದ ಕುಂಞಂಗಡ ಬೋಸ್ ಮಾದಪ್ಪ, ಕಾಳಿಮಾಡ ಪ್ರಶಾಂತ್, ಮಾಣಿರ ಮುತ್ತಪ್ಪ ಮತ್ತಿತರರು ಉಪಅರಣ್ಯ ಸಂರಕ್ಷಣಾಧಿಕಾರಿ ಯೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.