ಮಡಿಕೇರಿ, ಸೆ.18 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಧಾಳಿಯಿಂದ ಜೀವಹಾನಿ ಮತ್ತು ಕೃಷಿ ಹಾನಿಯಾಗುತ್ತಿದ್ದರೂ ರಾಜ್ಯ ಸರ್ಕಾರ ಹಾಗೂ ಅರಣ್ಯ ಸಚಿವರು ಅಗತ್ಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿರುವ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಸಂಕೇತ್ ಪೂವಯ್ಯ ತಾ.20 ರಂದು ವೀರಾಜಪೇಟೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಪಕ್ಷದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿರುವದಾಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಯನ್ನು ಅನುಸರಿಸಿ ಕೃಷಿಕರ ಮೇಲೆ ನಡೆಸುತ್ತಿರುವ ಗದಾಪ್ರಹಾರದಿಂದ 1800 ಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆಗೆ ಶರಣಾಗಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಕಾಡಾನೆ ಹಾವಳಿಯಂತಹ ಘಟನೆಗಳು ಮೈಸೂರು ಮತ್ತು ವರುಣ ಕ್ಷೇತ್ರದಲ್ಲಿ ನಡೆದಿದ್ದರೆ ಮುಖ್ಯ ಮಂತ್ರಿಗಳು ಇದೇ ರೀತಿ ನಿರ್ಲಕ್ಷ್ಯ ವಹಿಸುತ್ತಿದ್ದರೆ ಎಂದು ಪ್ರಶ್ನಿಸಿದರು.
ಅರಣ್ಯ ಸಚಿವರು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರದೆ ನಿಷ್ಕ್ರಿಯ ರಾಗಿದ್ದಾರೆ ಎಂದು ಆರೋಪಿಸಿದ ಅವರು ಸರ್ಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವದಾಗಿ ಎಚ್ಚರಿಕೆ ನೀಡಿದರು.
ವೀರಾಜಪೇಟೆ ತಾಲೂಕಿನ ಪಾಲಂಗಾಲ ಗ್ರಾಮದ ಕರಿನೆರವಂಡ ಮುತ್ತಪ್ಪ ಎಂಬವರು ಕಾಡಾನೆ ಧಾಳಿಗೆ ಸಿಲುಕಿ ಶಾಶ್ವತ ಅಂಗವೈಕಲ್ಯತೆ ಹೊಂದಿದ್ದರು ಇಲ್ಲಿಯವರೆಗೆ ಸೂಕ್ತ ಪರಿಹಾರವನ್ನು ಅರಣ್ಯ ಇಲಾಖೆ ನೀಡಿಲ್ಲ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಸರಕಾರ, ಅರಣ್ಯ ಇಲಾಖೆ, ಜಿಲ್ಲಾ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸುವದಾಗಿ ತಿಳಿಸಿ, ಗೂಡ್ಲೂರು ಚೆನ್ನಂಗಿಯಲ್ಲಿ ಪುನರ್ವಸತಿಗೊಂಡ 166 ಗಿರಿಜನ ಕುಟುಂಬಗಳಿಗೆ ಅಗತ್ಯ ಸವಲತ್ತು ಒದಗಿಸಿಲ್ಲ. ಇವರಿಗೆ ಮುಂದಿನ 15 ದಿನಗಳ ಒಳಗಾಗಿ ಸೂಕ್ತ ಸೌಲಭ್ಯಗಳನ್ನು ಒದಗಿಸದಿದ್ದಲ್ಲಿ ಕಾನೂನು ಹೋರಾಟ ನಡೆಸುವದಾಗಿ ಸಂಕೇತ್ ಪೂವಯ್ಯ ಹೇಳಿದರು.