ಸಿದ್ದಾಪುರ, ಸೆ. 1: ಜಿಲ್ಲಾದ್ಯಂತ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕಾಡಾನೆ ಹಾವಳಿ ತಡೆಗಟ್ಟಲು ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.

ಸಿದ್ದಾಪುರ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಿಲ್ಲಾದ್ಯಂತ ಕಾಡಾನೆ ಉಪಟಳ ಹೆಚ್ಚಾಗಿದ್ದು, ಹಲವಾರು ಮಂದಿ ಕಾಡಾನೆ ಧಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕಾಡಾನೆಗಳನ್ನು ಕಾಡಿಗಟ್ಟಲು ಈಗಾಗಲೇ ರಾಜ್ಯ ಸರಕಾರ ಯೋಜನೆಯನ್ನು ರೂಪಿಸಿದ್ದು, ಶೀಘ್ರದಲ್ಲೇ ಶಾಶ್ವತ ಪರಿಹಾರ ಒದಗಿಸ ಲಾಗುವದು ಎಂದರು.

ಸಿದ್ದಾಪುರ ಪಟ್ಟಣದ ಕಸ ವಿಲೇವಾರಿಗೆ ಸೂಕ್ತ ಜಾಗ ಗುರುತಿಸಲಾ ಗಿದ್ದು, ಜಿಲ್ಲಾಧಿಕಾರಿಗಳು ಜಾಗ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಹಲವಾರು ವರ್ಷಗಳ ಸಮಸ್ಯೆ ಇದರಿಂದಾಗಿ ಬಗೆಹರಿಯಲಿದೆ ಎಂದರು. ಗ್ರಾಮೀಣ ಭಾಗದ ರಸ್ತೆಗಳ ದುಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರಸ್ತೆ ಹದಗೆಟ್ಟಿದ್ದು, ಕೆಲವು ರಸ್ತೆಗಳನ್ನು ಲೊಕೋಪಯೋಗಿ ಇಲಾಖೆಗೆ ಸೇರಿಸಬೇಕಾಗಿದೆ. ಗ್ರಾಮೀಣ ರಸ್ತೆಗಳನ್ನು ಡಾಮರೀಕರಿಸುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವದು ಎಂದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಎಸ್. ವೆಂಕಟೇಶ್, ಹಿರಿಯ ಮುಖಂಡ ಉಸ್ಮಾನ್ ಹಾಜಿ, ವೀರಾಜಪೇಟೆ ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷ ಎಂ. ಬಿಜೋಯ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸುರೇಶ್, ವಲಯ ಕಾಂಗ್ರೆಸ್ ಅಧ್ಯಕ್ಷ ವಿ.ಕೆ. ಬಷೀರ್, ಗ್ರಾ.ಪಂ. ಅಧ್ಯಕ್ಷ ಮಣಿ, ಸದಸ್ಯ ರೆಜಿತ್ ಕುಮಾರ್, ಮಾಜಿ ಗ್ರಾ.ಪಂ. ಸದಸ್ಯ ಪ್ರತೀಶ್ ಇನ್ನಿತರರು ಇದ್ದರು.