ಸಿದ್ದಾಪುರ, ಜು. 28: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಅರಣ್ಯ ಇಲಾಖೆ ಹಾಗೂ ಸರಕಾರ ಕಾಡಾನೆ ಹಾವಳಿ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಸಿದ್ದಾಪುರ ಎಸ್.ಡಿ.ಪಿ.ಐ. ಘಟಕ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಎ.ಎಸ್. ಮುಸ್ತಫಾ, ಸಿದ್ದಾಪುರ ಸೇರಿದಂತೆ ಜಿಲ್ಲಾದ್ಯಂತ ಕಾಡಾನೆ ಹಾವಳಿ ಮಿತಿಮೀರಿದ್ದು, ಗ್ರಾಮಗಳ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಇದೀಗ ನಗರಕ್ಕೆ ಲಗ್ಗಯಿಟ್ಟಿವೆ. ಕಾಫಿ ತೋಟಗಳಲ್ಲಿ ರಾಜಾರೋಷವಾಗಿ ಸುತ್ತಾಡುತ್ತಿರುವ ಕಾಡಾನೆಗಳಿಂದಾಗಿ ಕಾರ್ಮಿಕರು ಜೀವ ಭಯದಲ್ಲಿ ಕೆಲಸಕ್ಕೆ ತೆರಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಡಾನೆಯ ಧಾಳಿಯಿಂದ ಕೆಲಸದ ವೇಳೆಯಲ್ಲಿ ಹಲವು ಕಾರ್ಮಿಕರು ಮೃತಪಟ್ಟಿದ್ದು, ಹಲವು ಮಂದಿ ಕಾರ್ಮಿಕರು ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಆದರೆ ಅರಣ್ಯ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಮೌನ ವಹಿಸಿರುವದು ಖಂಡನೀಯ. ಕಾಡಾನೆ ಹಾವಳಿಯ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಸಂಸದರು ಚಕಾರ ಎತ್ತುತ್ತಿಲ್ಲ. ವಿಧಾನ ಸಭೆಯ ಕಲಾಪದಲ್ಲಿ ಗಂಭೀರ ವಿಷಯವಾದ ಕಾಡಾನೆ ಹಾವಳಿಯ ಬಗ್ಗೆ ಚರ್ಚಿಸದೇ, ಅನಗತ್ಯ ಗೊಂದಲ ಉಂಟುಮಾಡಿ ಕಾಲಹರಣ ಮಾಡಿದ್ದು, ಕಲಾಪವನ್ನು ಮೊಟಕು ಗೊಳಿಸಿದ್ದಾರೆ ಎಂದು ಆರೋಪಿಸಿದರು.
ಮುಂದಿನ 15 ದಿನಗಳಲ್ಲಿ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಕಾರ್ಮಿಕರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಮಡಿಕೇರಿಯ ಅರಣ್ಯ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವದು. ಮಾತ್ರವಲ್ಲದೇ ಬೆಂಗಳೂರು ಚಲೋ ಕಾರ್ಯಕ್ರಮದ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.
ಸಿದ್ದಾಪುರ ಗ್ರಾ.ಪಂ. ಸದಸ್ಯೆ ವೈ. ಲಕ್ಷ್ಮಿ ಮಾತನಾಡಿ, ಕಾಫಿ ತೋಟದಲ್ಲಿ ಕೆಲಸ ಮಾಡುವವರು ಮನೆಗೆ ಹಿಂತಿರುಗಿ ಹೋಗುವದೇ ಸಂಶಯವಾಗಿದೆ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯರಾದ ಎಂ.ಎಂ. ಶೌಕತ್ ಆಲಿ, ರಾಧ, ವೈ. ಕೃಷ್ಣ ಮತ್ತು ಎ.ಎಸ್. ಹುಸೈನ್ ಇದ್ದರು.