ಶ್ರೀಮಂಗಲ, ಆ. 24: ದ.ಕೊಡಗಿನ ಶ್ರೀಮಂಗಲ, ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬ್ರಹ್ಮಗಿರಿ ಅರಣ್ಯದ ಅಂಚಿನಲ್ಲಿ ದಿನನಿತ್ಯ ಕಾಡಾನೆ ಹಾವಳಿ ಮಿತಿ ಮೀರಿದ್ದು, ಈ ಭಾಗದ ಗ್ರಾಮಗಳಲ್ಲಿ ಕಾಡಾನೆ ಹಿಂಡುಗಳು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆ ಕಾಡಾನೆಗಳನ್ನು ಕೂಡಲೇ ಅರಣ್ಯಕ್ಕ್ಕೆ ಅಟ್ಟಿ ಸಮಸ್ಯೆ ಬಗೆಹರಿಸಬೆಕೆಂದು ಒತ್ತಾಯಿಸಿ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಗಳ ಕಚೇರಿ ಎದುರು ಈ ಭಾಗದ ಬೆಳೆಗಾರರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ವಲಯ ಅರಣ್ಯಾಧಿಕಾರಿ ಶಿಲ್ಪ ಅವರೊಂದಿಗೆ ಸಮಸ್ಯೆ ಬಿಚ್ಚಿಟ್ಟ ಬೆಳೆಗಾರರು ಗ್ರಾಮದಲ್ಲಿಯೇ ಸೇರಿಕೊಂಡಿರುವ ಕಾಡಾನೆಗಳು ಕಾಫಿ, ಬಾಳೆ, ಭತ್ತದ ಬೆಳೆಗಳನ್ನು ನಾಶಮಾಡುತ್ತಿವೆ. ಇದರಿಂದ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ. ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯ ಕುರ್ಚಿ, ಬೀರುಗ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಇದರಿಂದ ತೋಟ ಗದ್ದೆಗಳಿಗೆ ಕೆಲಸಕ್ಕೂ ತೆರಳು ಸಾಧ್ಯವಾಗದೆ ಆತಂಕ ಎದುರಾಗಿದೆ. ಶಾಲಾ ಮಕ್ಕಳೂ ಶಾಲೆಗೆ ಹೋಗಲು ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಕೂಡಲೇ ಅರಣ್ಯ ಇಲಾಖೆ ಕಾಡಾನೆ ಹಿಂಡುಗಳನ್ನು ಗ್ರಾಮದಿಂದ ಅರಣ್ಯಕ್ಕೆ ಸೇರಿಸಿ ಮತ್ತೆ ಗ್ರಾಮಕ್ಕೆ ಬರದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮೇಲಾಧಿಕಾರಿಗಳ ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಿದರು. ಈ ಸಂದರ್ಭ ಡಿ.ಸಿ.ಎಫ್ ಎಂ.ಎಂ. ಜಯ ಹಾಗೂ ಎ.ಸಿ.ಎಫ್ ಸೀಮಾ ಅವರೊಂದಿಗೆ ದೂರವಾಣಿ ಮೂಲಕ ವಲಯ ಅರಣ್ಯಾಧಿಕಾರಿ ಶಿಲ್ಪ ಮಾತನಾಡಿದರು. ಸೆ.1 ಕ್ಕೆ ಶ್ರೀಮಂಗಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಾಹ್ನ 11 ಗಂಟೆಗೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು - ಬೆಳೆಗಾರರ ನಡುವೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಶಿಲ್ಪ ನೀಡಿದರು. ವಲಯಾರಣ್ಯಾಧಿüಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ಜಿಲ್ಲಾ ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್, ಬೆಳೆಗಾರ ಒಕ್ಕೂಟದ ಪ್ರಮುಖರಾದ ಮಾಣೀರ ವಿಜಯ ನಂಜಪ್ಪ, ಕಾಳಿಮಾಡ ತಮ್ಮು ಮುತ್ತಣ್ಣ, ಕೈಬುಲೀರ ಹರೀಶ್, ಮಾಣೀರ ಮುತ್ತಪ್ಪ, ಶ್ರೀಮಂಗಲ ಗ್ರಾ. ಪಂ. ಮಾಜಿ ಅಧ್ಯಕ್ಷ ಎ.ಎಸ್. ಕುಶಾಲಪ್ಪ, ರೈತ ಸಂಘದ ಅಯ್ಯಮಾಡ ಸೋಮೇಶ್, ಮಚ್ಚಮಾಡ ರಂಜಿ, ಬೋಡಂಗಡ ಕಾರ್ಯಪ್ಪ, ಅಜ್ಜಮಾಡ ಪ್ರಮೋದ್, ಮತ್ತಿತರರು ಹಾಜರಿದ್ದರು.