ಗೋಣಿಕೊಪ್ಪಲು, ಆ. 4: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ತೀವ್ರಗೊಂಡಿದ್ದು, ಕೃಷಿಕರು ಹಾಗೂ ರೈತಾಪಿ ವರ್ಗದ ಫಸಲು ನಷ್ಟ ದಿನೇ ದಿನೇ ಅಧಿಕವಾಗುತ್ತಿರುವದಾಗಿ ಗ್ರಾಮಸ್ಥರುÀ ಆರೋಪ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಬಹುತೇಕ ಪ್ರದೇಶಗಳು ವೀರಾಜಪೇಟೆ ವಲಯಾರಣ್ಯಾಧಿಕಾರಿ ವ್ಯಾಪ್ತಿಗೆ ಒಳಪಟ್ಟಿದ್ದು, ತೋಟ ಹಾಗೂ ಸಮೀಪದ ಕಾಡುಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಲಿ, ಇಲ್ಲವೆ ಮೀಸಲು ಅರಣ್ಯ ಪ್ರದೇಶದತ್ತ ಕಾರ್ಯಾಚರಣೆ ಮೂಲಕ ಅಟ್ಟುವಂತಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸುಮಾರು 5-6 ಆನೆಗಳ ಹಿಂಡು ಹಗಲು ಹೊತ್ತಿನಲ್ಲಿಯೇ ಇಲ್ಲಿನ ಮುಖ್ಯರಸ್ತೆಗಳಲ್ಲಿ ಓಡಾಟ ನಡೆಸುತ್ತಿದ್ದು, ಒಂಟಿ ಸಲಗವೊಂದು ರಾತ್ರಿಯ ವೇಳೆ ರೈತರ ಮಡಿಗಳಿಗೆ ನುಗ್ಗಿ ಭತ್ತದ ಪೈರನ್ನು ನಾಶಪಡಿಸು ತ್ತಿರುವದಾಗಿ ಆರೋಪ ವ್ಯಕ್ತವಾಗಿದೆ. ಇಲ್ಲಿನ ಕುಂದೀರ ಪ್ರಕಾಶ್ ಎಂಬವರ ತೋಟಕ್ಕೆ ರಾತ್ರಿ ನುಸುಳಿದ ಒಂಟಿ ಸಲಗ ಕಾಫಿ, ಬಾಳೆ ಅಲ್ಲದೆ ನಾಟಿ ಮಾಡಲು ಸಿದ್ಧಗೊಂಡಿದ್ದ ಪೈರನ್ನು ತಿಂದು ನಾಶಗೊಳಿಸಿತ್ತು. ಇದೀಗ ಗೊಟ್ಟಡದ ಕೃಷಿಕ ವಿ.ಎಂ. ಬಾಲಕೃಷ್ಣ ಎಂಬವರ ಕಾಫಿ ತೋಟಕ್ಕೂ ನುಸುಳಿದ ಕಾಡಾನೆ ಕಾಫಿ ಗಿಡಗಳಲ್ಲದೆ, ಕಾಫಿ ಮಿಡಿ ಇರುವ ನೂರಾರು ರೆಂಬೆಗಳನ್ನು ತುಂಡರಿಸುತ್ತಾ ಸಾಗಿದ್ದು ಲಕ್ಷಾಂತರ ಮೌಲ್ಯದ ಕಾಫಿ ಫಸಲು ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಕಾಫಿ ತೋಟದ ಉದ್ದಗಲಕ್ಕೂ ಕಾಫಿ ಕಚ್ಚಿರುವ ರೆಂಬೆಗಳು ಬಿದ್ದಿದ್ದು ಸದರಿ ಬಾಲಕೃಷ್ಣ ಅವರು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ. ಕಳೆದ 7-8 ವರ್ಷಗಳಿಂದ ಕಾಡಾನೆ ಉಪಟಳವಿದ್ದಾಗ್ಯೂ ಇಷ್ಟೊಂದು ಕಾಫಿ ನಷ್ಟವಾಗಿರಲಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ಹೇಳಿದ ಅವರು ಸಂಜೆಯಾಗು ತ್ತಿದ್ದಂತೆ ಮುಖ್ಯ ರಸ್ತೆಯಲ್ಲಿ ಓಡಾಟವೂ ಕಷ್ಟಸಾಧ್ಯವಾಗುತ್ತಿದೆ.
ವೀರಾಜಪೇಟೆ ವಲಯಾರಣ್ಯಾಧಿಕಾರಿಗಳು ಹಾಗೂ ಡಿಸಿಎಫ್ ಅವರು ಖುದ್ದು ಭೇಟಿ ನೀಡಿ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಇದೀಗ ನೀಡುತ್ತಿರುವ ಪರಿಹಾರ ಏನೇನೂ ಸಾಲದು. ಬಾಳೆ, ಅಡಿಕೆ, ತೆಂಗು ಇತ್ಯಾದಿ ಕೃಷಿಯನ್ನು ಆನೆಯ ಹಿಂಡುಗಳು ನಾಶ ಮಾಡುತ್ತಿದ್ದು, ಮುಂದೆ ಕೃಷಿ ವೃತ್ತಿಯನ್ನೇ ಕೈಬಿಡುವಂತಹ ಸ್ಥಿತಿ ನಿರ್ಮಾಣ ವಾಗಬಹುದು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.