ವೀರಾಜಪೇಟೆ, ಸೆ. 7: ಜಿಲ್ಲೆಯಲ್ಲಿ ಕಾಡಾನೆ ಧಾಳಿಗೆ ಹಗಲಿರುಳೆನ್ನದೆ ಬಡವರು, ಬಡ ಕೂಲಿ ಕಾರ್ಮಿಕರು ನಿರಂತರ ಬಲಿಯಾಗುತ್ತಿದ್ದರೂ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಬಡ ಕೂಲಿ ಕಾರ್ಮಿಕರಿಗೆ ರಕ್ಷಣೆ ನೀಡದೆ ಸರಿಯಾದ ಕ್ರಮ ಕೈಗೊಳ್ಳದಿರುವದರಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾನೂನು ತಜ್ಞರ ಸಲಹೆಯೊಂದಿಗೆ ಸರಕಾರದ ವಿರುದ್ಧ ಕಾನೂನು ಸಮರ ನಡೆಸಲು ಜಾತ್ಯತೀತ ಜನತಾ ದಳದ ಪಕ್ಷ ಅಂತಿಮ ನಿರ್ಧಾರ ಕೈಗೊಂಡಿರು ವದಾಗಿ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದ್ದಾರೆ.

ಪಾಲಿಬೆಟ್ಟ ಗ್ರಾಮದ ಬಜೆಕೊಲ್ಲಿಯಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ಚೆಟ್ಟಳ್ಳಿ ಕಾನನಗಾಡು ಗ್ರಾಮದ ನಿವಾಸಿ ಅರುಳ್ ಜೋಸೆಫ್ ಎಂಬವರನ್ನು ಕಾಡಾನೆ ಧಾಳಿ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಾಡಾನೆ ಧಾಳಿಗೆ ಸಂಬಂಧಿಸಿದಂತೆ ಜಿಲ್ಲೆಯನ್ನು ರಾಜ್ಯದ ಮುಖ್ಯ ಮಂತ್ರಿಗಳು ಹಾಗೂ ಅರಣ್ಯ ಸಚಿವರು ನಿರ್ಲಕ್ಷ್ಯ ಭಾವನೆಯಿಂದ ಕಾಣುತ್ತಿದ್ದು, ಜಿಲ್ಲೆಯ ಮಟ್ಟಿಗೆ ಮಲತಾಯಿ ಧೋರಣೆÉ ತೋರುತ್ತಿ ದ್ದಾರೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಕೃಷಿಕರು ಹಾಗೂ ಕಾರ್ಮಿಕರು ಕಾಡಾನೆ ಹಾವಳಿಯಿಂದ ಜೀವ ಭಯದಿಂದ ಬದುಕು ಸಾಗಿಸುತ್ತಿದ್ದಾರೆ. ಆನೆಗಳ ಧಾಳಿಯ ದುರಂತಕ್ಕೆ ಜಿಲ್ಲೆಯ ಅನೇಕ ಅಮಾಯಕರು ನಿರಂತರ ಬಲಿಯಾಗುತ್ತಿದ್ದಾರೆ. ಸಿದ್ದಾಪುರದ ಬಸವನಹಳ್ಳಿಯಲ್ಲಿ ಕಳೆದ 7 ದಿನಗಳ ಹಿಂದೆ ಕಾಡಾನೆ ಧಾಳಿಯಿಂದ ಚೆಲುವ ಎಂಬಾತನ ದೇಹ ಛಿದ್ರಗೊಂಡು ಸಾವನ್ನಪ್ಪಿದ ಬೆನ್ನಲ್ಲೇ ಈಗ ಕಾರ್ಮಿಕ ಅರುಳ್ ಜೋಸೆಫ್ ಕಾಡಾನೆ ಧಾಳಿಗೆ ತುತ್ತಾಗಿದ್ದಾನೆ. ಹಾವಳಿಯನ್ನು ತಡೆಯಲು ಹಲವಾರು ಯೋಜನೆಗಳಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಮೌನ ವಹಿಸಿ ಬಲಿಯಾದವರ ಕುಟುಂಬಕ್ಕೆ ಪರಿಹಾರ ನೀಡಲು ಕೈಯಲ್ಲಿ ಚೆಕ್ ಪುಸ್ತಕ ಹಿಡಿದು ಸಂಚರಿಸುತ್ತಿದ್ದಾರೆ. ಅಮಾಯಕರ ಜೀವಕ್ಕೆ ಮೌಲ್ಯ ಇಲ್ಲದಂತಾಗಿದೆ. ಅರಣ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು.