ಸುಂಟಿಕೊಪ್ಪ, ಆ. 25: ಸುಂಟಿಕೊಪ್ಪದ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಬೆಳೆ ಫಸಲುಗಳು ನಾಶಗೊಂಡು ತೋಟದ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.
ಇಲ್ಲಿಗೆ ಸಮೀಪದ 7ನೇ ಗ್ರಾಮ ಪಂಚಾಯಿತಿಗೆ ಸೇರಿದ ಕಂಬಿಬಾಣೆ ಗ್ರಾಮದಲ್ಲಿರುವ ಟಿ.ಆರ್. ಶ್ರೀನಿವಾಸ್ ಅವರ ಮ್ಯಾಗಡೋರ್ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೋಟದಲ್ಲಿರುವ ಕಾಫಿ, ಕಿತ್ತಳೆ ಫಸಲುಗಳನ್ನು ಸಂಪೂರ್ಣವಾಗಿ ನಾಶ ಮಾಡಿವೆ.ಕಳೆದ ಹಲವು ದಿನಗಳಿಂದ ಈ ಭಾಗದಲ್ಲೇ ಕಾಡಾನೆಗಳ ಗುಂಪು ನೆಲೆವೂರಿದ್ದು, ಹೊಸಕೋಟೆ, ಕಂಬಿಬಾಣೆ, ಕಲ್ಲೂರು ಸುತ್ತಮುತ್ತಲಿನ ತೋಟಗಳ ಫಸಲನ್ನು ಧ್ವಂಸಗೊಳಿಸುತ್ತಿವೆ. ಈ ಬಗ್ಗೆ ಮಾತನಾಡಿದ ಟಿ.ಆರ್. ಶ್ರೀನಿವಾಸ್, ತೋಟದಲ್ಲಿಯೇ ಕಾಡಾನೆಗಳು ಬೀಡುಬಿಡುತ್ತಿದ್ದು, ಫಸಲುಗಳನ್ನು ನಷ್ಟಪಡಿಸಿವೆ. ಕಾಡಾನೆಗಳು ಸಂಚರಿಸುವ ಸ್ಥಳಗಳಲ್ಲಿ ಕಾಫಿ ಗಿಡಗಳು ಸಂಪೂರ್ಣ ಹಾಳಾಗುತ್ತಿವೆ. ಮುಂದಿನ ದಿನಗಳಲ್ಲಿ ಜೀವನ ಸಾಗಿಸುವದಕ್ಕೂ ಕಷ್ಟಪಡಬೇಕಾಗುತ್ತದೆ. ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಾಡಾನೆ ಹಾವಳಿಯನ್ನು ಕೂಡಲೇ ನಿಯಂತ್ರಿಸದಿದ್ದಲ್ಲಿ ರೈತರು ಕೃಷಿಯನ್ನು ನಂಬಿ ಬದುಕುವದು ಕಷ್ಟ ಸಾಧ್ಯವಾಗಿದೆ ಎಂದು ಹೇಳಿದರು.
ಕಂಬಿಬಾಣೆಯ ಸುತ್ತಮುತ್ತಲಿನ ತೋಟದ ಕಾರ್ಮಿಕರು ಈ ಕಾಡಾನೆಗಳ ಹಾವಳಿಯಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಕಾಲಕಳೆಯುವಂತಹ ಪರಿಸ್ಥಿತಿ ಎದುರಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರೂ ಕಾಡಾನೆಗಳನ್ನು ಹಿಡಿಯುವ ಬಗೆ ಯಾವದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಕಾಡಾನೆಗಳು ಧಾಳಿ ಮಾಡಿರುವ ಸ್ಥಳಗಳಿಗೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.