ಸೋಮವಾರಪೇಟೆ, ಜ. 28: ನೋಟ್ ಬ್ಯಾನ್ ನಂತರ ಸುಂಟಿಕೊಪ್ಪದ ರೆಸಾರ್ಟ್‍ನಲ್ಲಿ 35ಲಕ್ಷ ರೂಪಾಯಿ ಹೊಸ ನೋಟಿನೊಂದಿಗೆ ಸಿಕ್ಕಿಬಿದ್ದ ಕಾಂಗ್ರೆಸ್ ಬೆಂಬಲಿತ ತಾ.ಪಂ. ಸದಸ್ಯನ ವಿರುದ್ಧ ಬಿಜೆಪಿ ಹೋರಾಡುತ್ತಿದ್ದರೆ, ಭ್ರಷ್ಟಾಚಾರದ ಪರವಾಗಿ ಹೋರಾಟ ನಡೆಸಿದ ಕಾಂಗ್ರೆಸ್‍ಗೆ ಜೆಡಿಎಸ್ ಬೆಂಬಲ ನೀಡುತ್ತಿರುವದು ಶೋಚನೀಯ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಾಗೂ ತಾ.ಪಂ. ಸದಸ್ಯ ಎಂ.ಬಿ. ಅಭಿಮನ್ಯುಕುಮಾರ್ ಟೀಕಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯಗೊಂಡ ಬಳಿಕ ಖಾಸಗಿ ರೆಸಾರ್ಟ್‍ನಲ್ಲಿ ನಡೆದ ಲಕ್ಷಾಂತರ ರೂ.ಗಳ ವಹಿವಾಟಿನಲ್ಲಿ ಆರೋಪವನ್ನು ಎದುರಿಸುತ್ತಿರುವ ತಾಲೂಕು ಪಂಚಾಯಿತಿ ಸದಸ್ಯರಾದ ಅನಂತ್‍ಕುಮಾರ್ ಅವರನ್ನು ವಿಚಾರಣೆ ಪೂರ್ಣಗೊಳ್ಳುವ ತನಕ ತಾ.ಪಂ. ಸಭೆಯಿಂದ ಹೊರಗಿಡುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗುತ್ತಿದ್ದ ಸಂದರ್ಭ ಅವಾಚ್ಯ ಪದಗಳನ್ನು ಬಳಸಿದ ಕಾಂಗ್ರೆಸ್ ಸದಸ್ಯನ ಪರವಾಗಿ ಹೋರಾಟ ನಡೆಸುವದೇ ಅರ್ಥಹೀನ ಎಂದರು.

ಆದಾಯ ತೆರಿಗೆ ಇಲಾಖೆಯಿಂದ ತನಿಖೆ ನಡೆಯುತ್ತಿರುವ ಹಿನ್ನೆಲೆ ಸದಸ್ಯ ಅನಂತ್ ಅವರು ರಾಜೀನಾಮೆ ನೀಡಬೇಕು. ಇದರೊಂದಿಗೆ ಐ.ಟಿ. ಧಾಳಿ ನಡೆದಿರುವ ಸಚಿವ ರಮೇಶ್ ಜಾರಕಿಹೊಳಿ ಅವರನ್ನೂ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ತಾ. 30ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಜೇಸಿ ವೇದಿಕೆಯಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ ಎಂದರು.

ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಕಾಂಗ್ರೆಸಿನ ಹಿರಿಯ ಪದಾಧಿಕಾರಿಗಳು ತೀರಾ ಅಶ್ಲೀಲ ಹಾಗೂ ಅವಾಚ್ಯ ಪದಗಳನ್ನು ಬಳಸಿರುವದು ಕಾಂಗ್ರೆಸಿನ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕುಟುಕಿದರು.

ಬಿಜೆಪಿಯ 14 ಸದಸ್ಯರನ್ನು ಹೊಂದಿರುವ ತಾಲೂಕು ಪಂಚಾಯಿತಿ ಯಲ್ಲಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಕುತಂತ್ರದಿಂದ ಮೀಸಲಾತಿಯನ್ನು ಸೃಷ್ಟಿಸಿ ಕೇವಲ 2 ಸ್ಥಾನವನ್ನು ಹೊಂದಿರುವ ಜೆಡಿಎಸ್‍ಗೆ ಅಧಿಕಾರ ನೀಡಿರುವದೇ ಕಾಂಗ್ರೆಸ್ ಪಕ್ಷದ ಸಾಧನೆಯಾಗಿದೆ ಎಂದರು.

ತಾಲೂಕು ಪಂಚಾಯಿತಿಯ ಅಧ್ಯಕ್ಷೆ ಪುಷ್ಪ ರಾಜೇಶ್ ಬಿಜೆಪಿ ಬೆಂಬಲದಿಂದ ಅಧಿಕಾರ ಪಡೆದಿದ್ದಾರೆ. ಅಧ್ಯಕ್ಷರ ಅಧಿಕಾರವನ್ನು ಹೈಜಾಕ್ ಮಾಡಲಾಗುತ್ತಿದೆ ಎಂದು ಜೆಡಿಎಸ್ ಆರೋಪಿಸುತ್ತಿರುವದು ಬಾಲಿಶತನ. ಅಧ್ಯಕ್ಷರಿಗೆ ಅವರದೇ ಆದ ಅಧಿಕಾರವಿದೆ. ಅದನ್ನು ಚಲಾಯಿಸುವದು ಅಧ್ಯಕ್ಷರ ಕ್ಷಮತೆಗೆ ಬಿಟ್ಟ ವಿಚಾರ. ಈ ಬಗ್ಗೆ ಜೆಡಿಎಸ್‍ನ ಆರೋಪ ನಿರಾಧಾರ ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷರು ಅಧಿಕಾರ ನಡೆಸುವ ಬದಲು ಅವರ ಪತಿ ಅಧ್ಯಕ್ಷರಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿಯೇ ತಾಲೂಕು ಪಂಚಾಯಿತಿ ಅಧ್ಯಕ್ಷರಿಗೆ ವಾಹನ ಸೌಕರ್ಯ ಇಲ್ಲ. ತಿಂಗಳಿಗೆ 100 ಲೀಟರ್ ಪೆಟ್ರೋಲ್ ಭತ್ಯೆ ಮಾತ್ರ ಇದೆ. ಕಾರ್ಯನಿರ್ವಹಣಾಧಿಕಾರಿಯ ಮೇಲೆ ಒತ್ತಡ ಹೇರಿ ಬಾಡಿಗೆ ಕಾರನ್ನು ಪಡೆದಿದ್ದಾರೆ. ಇದಕ್ಕೆ ಬಾಡಿಗೆಯನ್ನು ಕಾರ್ಯನಿರ್ವಹಣಾಧಿಕಾರಿ ತನ್ನ ಸ್ವಂತ ಹಣದಿಂದ ನೀಡುತ್ತಿದ್ದಾರೆ. ಜೆಡಿಎಸ್ ಮುಖಂಡರಿಗೆ ಇದು ಕಾಣುವದಿಲ್ಲವೇ? ಎಂದು ಪ್ರಶ್ನಿಸಿದರು.

ತಾ.ಪಂ. ಸಾಮಾನ್ಯ ಸಭೆಯ ಪೂರ್ಣ ಮಾಹಿತಿಯನ್ನೇ ಪಡೆಯದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನಾ ಅವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು. ಕಾನೂನಿನ ಕೊರತೆಯಿಂದ ಅಪಹಾಸ್ಯಕ್ಕೆ ಈಡಾಗಿದ್ದಾರೆ ಎಂದರು.

ಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯರಾದ ತಂಗಮ್ಮ, ಸಬಿತಾ ಚನ್ನಕೇಶವ, ಬಿಜೆಪಿ ಜಿಲ್ಲಾ ಪದಾಧಿಕಾರಿಗಳಾದ ಮೋಹನ್‍ದಾಸ್, ಕಿಬ್ಬೆಟ್ಟ ಮಧು, ಮಹೇಶ್ ತಿಮ್ಮಯ್ಯ, ಮನುಕುಮಾರ್ ರೈ, ಶರತ್ ಉಪಸ್ಥಿತರಿದ್ದರು.