ಸೋಮವಾರಪೇಟೆ, ಅ. 22: ಸ್ಥಳೀಯ ಪಟ್ಟಣ ಪಂಚಾಯಿತಿಗೆ ರಾಜ್ಯ ಪೌರಾಡಳಿತ ಸಚಿವರು ಭೇಟಿ ನೀಡಿದ ಸಂದರ್ಭ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಬೇಕಾದ ಕಾಂಗ್ರೆಸ್‍ನ ಕೆಲ ಸದಸ್ಯರು ಭಾವಚಿತ್ರ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡಿರುವದು ಖಂಡನೀಯ ಎಂದು ನಗರ ಬಿಜೆಪಿ ಹೇಳಿದೆನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ಎಸ್.ಆರ್. ಸೋಮೇಶ್, ರಾಜ್ಯ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭ ಪಟ್ಟಣದ ಅಭಿವೃದ್ಧಿ ಕುರಿತು ಸಚಿವರ ಗಮನ ಸೆಳೆಯಬೇಕಾಗಿದ್ದ ಕಾಂಗ್ರೆಸ್ ಸದಸ್ಯರು, ಪಟ್ಟಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಕೇಂದ್ರದಲ್ಲಿ ಅಳವಡಿಸಿರುವ ಶಾಸಕರ ಭಾವಚಿತ್ರವನ್ನು ತೆಗೆಸಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವನ್ನು ಅಳವಡಿಸಬೇಕೆಂದು ಪಟ್ಟು ಹಿಡಿಯುವ ಮೂಲಕ ಕಿಡಿಗೇಡಿತನ ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು.

ರಾಜ್ಯದ ಕನಕಪುರ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವನ್ನು ಮಾತ್ರ ಅಳವಡಿಸಿ ದ್ದಾರೆ. ರಾಜ್ಯದ ಸಚಿವರೊಂದಿಗೆ ಮುಖ್ಯಮಂತ್ರಿಗಳ ಭಾವಚಿತ್ರವನ್ನು ಏಕೆ ಅಳವಡಿಸಿಲ್ಲ ಎಂಬದನ್ನು ಕಾಂಗ್ರೆಸ್ಸಿಗರು ತಿಳಿಸಲಿ ಎಂದರು.

ರಾಜ್ಯದಲ್ಲಿ ಬಹುತೇಕ ಯೋಜನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ. 108 ಆಂಬ್ಯುಲೆನ್ಸ್ ಸೇವೆಯಲ್ಲೂ ಕೇಂದ್ರದ ಪಾಲಿದೆ. ಆದರೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರ ಭಾವಚಿತ್ರವನ್ನು ಮಾತ್ರ ಅಳವಡಿಸಲಾಗಿದೆ. ಇದರೊಂದಿಗೆ ಹೊಸಬೆಳಕು, ಅನ್ನಭಾಗ್ಯ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಗೂ ಕೇಂದ್ರದ ಅನುದಾನ ಬಿಡುಗಡೆ ಯಾಗಿದೆ. ಇವೆಲ್ಲದಕ್ಕೂ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರಕಾರದ ಸಚಿವರ ಭಾವಚಿತ್ರ ಅಳವಡಿಸು ತ್ತಾರೆಯೇ? ಎಂದು ಸೋಮೇಶ್ ಪ್ರಶ್ನಿಸಿದರು.

ಕುಡಿಯುವ ನೀರಿನ ಘಟಕಕ್ಕೆ ಮುಖ್ಯಮಂತ್ರಿ ಅವರ ಭಾವಚಿತ್ರವನ್ನು ಅಳವಡಿಸಿ ಎಂದು ಸಚಿವರು ಮೌಖಿಕ ಆದೇಶ ನೀಡಿದ್ದಾರೆಯೇ ಹೊರತು ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ. ಅಂತಹ ಆದೇಶವಿದ್ದರೆ ಮುಖ್ಯಮಂತ್ರಿಗಳ ಭಾವಚಿತ್ರ ಅಳವಡಿಸಲು ನಮ್ಮ ಅಭ್ಯಂತರವಿಲ್ಲ ಎಂದರು.

ಇದನ್ನು ಹೊರತುಪಡಿಸಿ ಕಿಡಿಗೇಡಿತನ ತೋರಿ ಭಾವಚಿತ್ರ ಅಳವಡಿಸಿದ್ದೇ ಆದಲ್ಲಿ ರಾಜ್ಯ ಸೋಮವಾರಪೇಟೆ ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರಚಾರ ಫಲಕಗಳಿಗೂ ಮೋದಿ ಅವರ ಭಾವಚಿತ್ರ ಅಳವಡಿಸ ಲಾಗುವದು. 108 ಆ್ಯಂಬ್ಯುಲೆನ್ಸ್‍ಗೆ ಕೇಂದ್ರ ಸಚಿವರ ಭಾವಚಿತ್ರ ಅಳವಡಿಸಲಾಗುವದು ಎಂದು ಎಚ್ಚರಿಸಿದ ಸೋಮೇಶ್, ಪ.ಪಂ.ನ ಕಾಂಗ್ರೆಸ್ ಸದಸ್ಯರು ಕ್ಷುಲ್ಲಕ ರಾಜಕೀಯ ಬಿಟ್ಟು ಅವರದೇ ಪಕ್ಷ ಅಧಿಕಾರ ದಲ್ಲಿರುವದರಿಂದ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಿ ಎಂದು ಕುಟುಕಿದರು.

ಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ನಗರ ಯುವ ಮೋರ್ಚಾ ಅಧ್ಯಕ್ಷ ಶರತ್‍ಚಂದ್ರ, ತಾಲೂಕು ಮೋರ್ಚಾದ ಕೊಮಾರಿ ಸತೀಶ್, ನಗರ ಉಪಾಧ್ಯಕ್ಷ ಪ್ರಮೋದ್ ಉಪಸ್ಥಿತರಿದ್ದರು.