ಮಡಿಕೇರಿ, ಆ. 22: ಕುಶಾಲನಗರ ಬಸ್ ಡಿಪೋಕ್ಕಾಗಿ ಗುಡ್ಡೆ ಹೊಸೂರು ಸಮೀಪದ ಬಸವನಹಳ್ಳಿ ಬಳಿ ಸರ್ವೆ ನಂಬರ್ 1/1ರಲ್ಲಿನ 4 ಏಕರೆ ಜಾಗ ಗುರುತಿಸಲಾಗಿದ್ದು, ನಿವೇಶನದ ದರವನ್ನು ಕೆಎಸ್‍ಆರ್‍ಟಿಸಿ ಸಂಸ್ಥೆ ಸದ್ಯದಲ್ಲೇ ಸರ್ಕಾರಕ್ಕೆ ಭರಿಸಲಿದೆ ಎಂದು ತಿಳಿಸಿರುವ ಕೆಎಸ್‍ಆರ್‍ಟಿಸಿ ನಿರ್ದೇಶಕ ಶೌಕತ್ ಆಲಿ, ಅದರ ಪತ್ರ ವ್ಯವಹಾರ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಸರಕಾರ ತಮ್ಮನ್ನು ಕೆಎಸ್‍ಆರ್‍ಟಿಸಿ ನಿರ್ದೇಶಕರನ್ನಾಗಿ ನೇಮಿಸಿದ ನಂತರ ಜಿಲ್ಲೆಗೆ ಬೇಕಾದ ಬಸ್ ಸೌಕರ್ಯಗಳ ಬಗ್ಗೆ ಸಾರ್ವಜನಿಕರು ಹಾಗೂ ಪಕ್ಷದ ಮುಖಂಡರು ನೀಡಿದ ಮನವಿಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಯೋನ್ಮುಖರಾಗಿರುವದಾಗಿ ಹೇಳಿದ್ದಾರೆ. ಮಡಿಕೇರಿ ನಗರಕ್ಕೆ 18 ನಗರ ಸಾರಿಗೆ ಸಂಸ್ಥೆ ಬಸ್‍ಗಳು ಅಕ್ಟೋಬರ್ ಮೊದಲ ವಾರದಲ್ಲಿ ಬರಲಿದ್ದು, ಶೀಘ್ರದಲ್ಲೇ ಗ್ರಾಮಾಂತರ ಪ್ರದೇಶಗಳಲ್ಲಿ ಸಾರಿಗೆ ಸಂಸ್ಥೆ ಬಸ್ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸೌಕತ್ ಆಲಿ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಕೆಎಸ್‍ಆರ್‍ಟಿಸಿ ಡಿಪೋ ಪ್ರಾರಂಭಿಸುವ ಕುರಿತು ಚರ್ಚಿಸಲು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜೇಂದ್ರ ಕುಮಾರ್ ಕಠಾರೀಯ ಅವರು 2014ರ ಡಿ.6 ರಂದು ಕೊಡಗು ಜಿಲ್ಲೆಗೆ ಆಗಮಿಸಿದ್ದರು. ಅಂದಿನ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷÀ ಬಿ.ಟಿ. ಪ್ರದೀಪ್, ಕರಕುಶಲ ನಿಗಮದ ಅಂದಿನ ಅಧ್ಯಕ್ಷರಾಗಿದ್ದ ಶಾಂತೆಯಂಡ ವೀಣಾ ಅಚಯ್ಯ, ಕೆಪಿಸಿಸಿ ಸದಸ್ಯರಾಗಿದ್ದ ಟಿ.ಪಿ. ರಮೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ಲೋಕೇಶ್ ಕುಮಾರ್ ಅವರ ಮನವಿ ಮೇರೆಗೆ ಡಾ. ರಾಜೇಂದ್ರ ಕುಮಾರ್ ಕಠಾರೀಯ ಅವರು ಜಿಲ್ಲಾಧಿಕಾರಿಗ ಳಾಗಿದ್ದ ಅನುರಾಗ್ ತಿವಾರಿ ಅವರಿಗೆ ಪತ್ರ ಬರೆದು ಡಿಪೋಗೆ ಜಾಗ ಕೋರಿದ್ದರು. ಈ ಪ್ರಯತ್ನದ ಫಲವಾಗಿ ನಾಲ್ಕು ಏಕರೆ ಜಾಗ ಮಂಜೂರಾಗು ತ್ತಿದೆಯೇ ಹೊರತು ವಕೀಲ ನಾಗೇಂದ್ರ ಬಾಬು ಅವರ ಪ್ರಯತ್ನ ಇದರಲ್ಲಿ ಇಲ್ಲ ಎಂದು ಶೌಕತ್ ಆಲಿ ಸ್ಪಷ್ಟಪಡಿಸಿದ್ದಾರೆ.