ಸೋಮವಾರಪೇಟೆ,ಡಿ.1: ಐಗೂರು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಅವರ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಒತ್ತಾಯಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐಗೂರು ವ್ಯಾಪ್ತಿಯಲ್ಲಿ ನಿರಂತರವಾಗಿ ಶಾಂತಿ ಭಂಗ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಪೊಲೀಸ್ ಇಲಾಖೆ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಅಲ್ಲದೆ ಸಮಾಜ ಘಾತುಕ ಶಕ್ತಿಗಳಿಗೆ ರಾಜಕೀಯ ಪಕ್ಷಗಳು ಬೆಂಬಲ ನೀಡಬಾರದು ಎಂದು ಹೇಳಿದರು.
ಐಗೂರಿನಿಂದ ಹೊಸತೋಟ ಗ್ರಾಮಕ್ಕೆ ತೆರಳಿದ ದುಷ್ಕರ್ಮಿಗಳ ತಂಡ, ಹೊಸತೋಟ ನಿವಾಸಿ ಗ್ರಾ.ಪಂ. ಸದಸ್ಯ ಕೆ.ಪಿ.ದಿನೇಶ್ ಅವರ ಮೇಲೆ ತೀವ್ರ ಸ್ವರೂಪದಲ್ಲಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕೃತ್ಯವನ್ನು ಬ್ಲಾಕ್ ಕಾಂಗ್ರೆಸ್ ಖಂಡಿಸುವದಲ್ಲದೆ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತದೆ ಎಂದು ಹೇಳಿದರು.
ಹೊಸತೋಟದ ಬಸ್ ನಿಲ್ದಾಣ ದಲ್ಲಿ ಯಾರೋ ಕಿಡಿಗೇಡಿಗಳು ಆಕ್ಷೇಪಾರ್ಹ ಭಿತ್ತಿಪತ್ರ ಅಂಟಿಸಿದ್ದಾರೆ. ಈ ಬಗ್ಗೆ ಗ್ರಾ.ಪಂ. ಸದಸ್ಯ ದಿನೇಶ್ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ದಿನೇಶ್ ಪೊಲೀಸರಿಗೆ ದೂರವಾಣಿ ಕರೆ ಮಾಡಿ, ಭಿತ್ತಿಪತ್ರವನ್ನು ವಶಕ್ಕೆ ಪಡೆಯುವಂತೆ ಮನವಿ ಮಾಡಿದ್ದಾರೆ. ಇದರಿಂದ ಕುಪಿತರಾದ ಐಗೂರಿನ ಕೆಲವರು ಹೊಸತೋಟಕ್ಕೆ ತೆರಳಿ ದಿನೇಶ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಇಂತಹ ಘಟನೆಗಳಿಂದ ಐಗೂರಿನಲ್ಲಿ ಸಾಮಾಜಿಕ ಶಾಂತಿಗೆ ಭಂಗವಾಗುತ್ತಿದೆ. ಸಮಾಜದ ನೆಮ್ಮದಿ ಕದಡುವ ವ್ಯಕ್ತಿಗಳು ಇದೀಗ ಜನಪ್ರತಿನಿಧಿಗಳ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು ಎಂದು ಲೋಕೇಶ್ ಆಗ್ರಹಿಸಿದ್ದಾರೆ.
ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕೂಬ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಪಕ್ಷದ ಮುಖಂಡರಾದ ಕೆ.ಎ. ಆದಂ, ಚೇತನ್, ಬಿ.ಜಿ. ಇಂದ್ರೇಶ್, ನತೀಶ್ ಮಂದಣ್ಣ ಉಪಸ್ಥಿತರಿದ್ದರು.