ಮಡಿಕೇರಿ, ನ. 20: ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಕೆಲ ದಿನಗಳಿಂದ ದಿಢೀರ್ ನಡೆದ ಬೆಳವಣಿಗೆ ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಸೃಷ್ಟಿಸಿದೆ. ಜಾತ್ಯತೀತ ನಿಲುವಿನ ಪಕ್ಷದಲ್ಲಿ ಬಹಿರಂಗವಾಗಿ ಅನಾವರಣ ಗೊಂಡ ಜಾತಿವಾದದ ವಿಚಾರದಿಂದ ಕಾಂಗ್ರೆಸ್ ಸಧ್ಯಕ್ಕೆ ಒಡೆದ ಮನೆಯಂತಾಗಿದೆ. ಕೊಡವೇತರರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಕಾಂಗ್ರೆಸ್ನ ಕೊಡವೇತರ ಮುಖಂಡರು ಕೊಡವರನ್ನು ಹೊರತಾಗಿರಿಸಿ ಗುಪ್ತ ಸಭೆ ನಡೆಸಿದ್ದಲ್ಲದೆ ನಿರ್ಧಾರವನ್ನು ಸಭೆ ನಡೆಸಿದ ಮುಖಂಡರು ಬಹಿರಂಗವಾಗಿ ಪತ್ರಿಕಾ ಹೇಳಿಕೆಯ ಮೂಲಕವೇ ಪ್ರಕಟಿಸಿದ್ದರು. ಇದು ಮಾತ್ರವಲ್ಲದೆ ವರಿಷ್ಠರ ಬಳಿ ನಿಯೋಗ ತೆರಳಿ ಒತ್ತಡ ಹೇರಿರುವ ವಿಚಾರವೂ ನಡೆದಿದೆ.
ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಡಿಸಿಸಿ ಪದಾಧಿಕಾರಿ ಎಸ್.ಎಂ. ಚಂಗಪ್ಪ ನೇತೃತ್ವದಲ್ಲಿ ಈ ಸಭೆ ನಡೆದ ಬಳಿಕ ಇದು ಪಕ್ಷದೊಳಗೆ ‘ಬಾಂಬ್’ ಸಿಡಿಸಿದಂತಾಗಿದೆ. ಸಹಜವಾಗಿ ಕಾಂಗ್ರೆಸ್ನ ಕೊಡವ ಮುಖಂಡರು ಇದರಿಂದ ‘ಗರಂ’ ಆಗಿದ್ದಾರೆ. ಕೆಲವರು ಈ ಬೇಡಿಕೆ ಮುಂದಿಟ್ಟಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೇಳಿಕೆ ನೀಡಿದ್ದಾರಲ್ಲದೆ ಜಾತಿವಾದ ಹುಟ್ಟು ಹಾಕಿದ್ದನ್ನು ಖಂಡಿಸಿದ್ದಾರೆ. ಕೆಪಿಸಿಸಿಗೂ ಕ್ರಮಕ್ಕೆ ಆಗ್ರಹಿಸಿ ಪತ್ರ ಬರೆಯಲಾಗಿದೆ.
ಬಾಳೆಲೆ ಮತ್ತಿತರ ಕೆಲ ಕಡೆಗಳಲ್ಲಿ ಸಭೆ ನಡೆಸಿ ಖಂಡನೆ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲಾಗಿದೆ. ಈ ನಡುವೆ ಡಿಸಿಸಿ ಅಧ್ಯಕ್ಷರು ಯಾರೂ ಪತ್ರಿಕಾ ಹೇಳಿಕೆ ನೀಡಬಾರದೆಂದು ಆದೇಶ ಹೊರಡಿಸಿದ್ದಾರೆ. ಈ ಕುರಿತಂತೆ ಸಧ್ಯದಲ್ಲಿ ಡಿಸಿಸಿ ಸಭೆ ನಡೆಯಲಿದ್ದು,
(ಮೊದಲ ಪುಟದಿಂದ) ಈ ಸಭೆಯಲ್ಲಿ ವ್ಯಾಪಕ ಚರ್ಚೆ - ವಿಚರ್ಚೆಯಾಗುವ ಸಾಧ್ಯತೆಯಿದೆ. ಈ ನಡುವೆ ಅಂದಿನ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವರು ನಂತರ ಮೌನಕ್ಕೆ ಶರಣಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಕೆಲವರು ಕೆಪಿಸಿಸಿ ಅಧ್ಯಕ್ಷರ ಬಳಿ ತೆರಳಿದ್ದ ನಿಯೋಗದಲ್ಲೂ ಕಂಡು ಬಂದಿಲ್ಲ.
ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸದ್ಯದಲ್ಲಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳನ್ನು ಒಳಗೊಂಡಂತೆ ಕೆಪಿಸಿಸಿ ವರಿಷ್ಠರೊಂದಿಗೆ ಬೆಂಗಳೂರಿನಲ್ಲಿ ಸಮಾಲೋಚನಾ ಸಭೆ ನಡೆಸಲಾಗುವದು. ವರಿಷ್ಠರ ದಿನಾಂಕ ನಿಗದಿಪಡಿಸಿದ ಬಳಿಕ ಸಭೆ ನಡೆಸಲಾಗುವದು ಎಂದು ಡಿಸಿಸಿ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದ್ದಾರೆ.
ಸಮರ್ಥರಿಗೆ ಅಧ್ಯಕ್ಷ ಸ್ಥಾನ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಕೊಡವರು - ಕೊಡವೇತರರು ಎಂಬ ವಿಚಾರವನ್ನು ಎಳೆದು ತರದಿರುವಂತೆ ಸೂಚಿಸಿರುವದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. ‘ಶಕ್ತಿ’ಯೊಂದಿಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್ ಅವರು ಈ ತಿಂಗಳ ಅಂತ್ಯದಲ್ಲಿ ಅಥವಾ ಮುಂದಿನ ತಿಂಗಳಲ್ಲಿ ಕಾಂಗ್ರೆಸ್ನ ನೂತನ ಜಿಲ್ಲಾ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವದು. ಯಾರು ಪಕ್ಷವನ್ನು ಕಟ್ಟುತ್ತಾರೆ ಹಾಗೂ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಮುಂದೆ ಸಾಗುತ್ತಾರೋ ಅಂತಹ ಸಮರ್ಥ ವ್ಯಕ್ತಿಯನ್ನು ಕೆಪಿಸಿಸಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಲಿದೆ ಎಂದು ದಿನೇಶ್ ಹೇಳಿದರು.