ಮಡಿಕೇರಿ, ನ. 5 : ಕೊಡಗಿನಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಮಕ್ಕಳಲ್ಲಿ ಸ್ವಚ್ಛ ಮತ್ತು ಶುದ್ಧ ಕನ್ನಡದ ಬಳಕೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶುದ್ಧ ಕನ್ನಡ ಮಾತನಾಡುವ ಮತ್ತು ಬರೆಯುವ ಎರಡು ವಿಶಿಷ್ಟ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್, ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶುದ್ಧವಾಗಿ ಕನ್ನಡದಲ್ಲಿ ಬರೆಯುವ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿ ಜಿಲ್ಲಾ ಮಟ್ಟದಲ್ಲಿ ವಿಜೇತ ವಿದ್ಯಾರ್ಥಿಗೆ ‘ಕೊಡಗಿನ ಅಪರಂಜಿ ಕನ್ನಡಿಗ’ ಪ್ರಶಸ್ತಿಯೊಂದಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುವದು ಎಂದರು. ಜಿಲ್ಲೆಯ ಪದವಿ ಪೂರ್ವ ಕಾಲೆÉೀಜು ವಿದ್ಯಾರ್ಥಿಗಳಿಗೆ ಶುದ್ಧ ಕನ್ನಡವನ್ನು ಮಾತನಾಡುವ ಭಾಷಣ ಸ್ಪರ್ಧೆಯನ್ನು ಆಯೋಜಿಸಿ ಜಿಲ್ಲಾ ಮಟ್ಟದಲ್ಲಿ ವಿಜೇತರಾದವರಿಗೆ ‘ಕನ್ನಡ ಮಯೂರ’ ಪ್ರಶಸ್ತಿ ಮತ್ತು ಚಿನ್ನದ ಪದಕವನ್ನು ನೀಡಿ ಗೌರವಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಆಯಾ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ತಮ್ಮ ವಿದ್ಯಾಸಂಸ್ಥೆಯ ಮಟ್ಟದಲ್ಲಿ ನಡೆಸಿ ಇಬ್ಬರು ಸ್ಪರ್ಧಿಗಳನ್ನು ಹೋಬಳಿ ಮಟ್ಟಕ್ಕೆ ಕಳುಹಿಸಿ ಕೊಡಬೇಕು. ಜಿಲ್ಲಾ ಕಸಾಪದಿಂದ ಹೋಬಳಿ ಮಟ್ಟದ ಸ್ಪರ್ಧೆಗಳನ್ನು ಇದೇ ನ.14 ರಿಂದ ಆಯೋಜಿಸಲಾಗುತ್ತದೆ. ಪ್ರತಿ ಹೋಬಳಿಯಿಂದ ಆಯ್ಕೆಯಾಗುವ ಮೂವರು ವಿದ್ಯಾರ್ಥಿಗಳಿಗೆÀ ತಾಲೂಕು ಮಟ್ಟದ ಸ್ಪರ್ಧೆಯನ್ನು ನಡೆಸಿ ಮತ್ತೆ ಪ್ರತಿ ತಾಲೂಕಿನಿಂದ ತಲಾ ಮೂವರು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂತಿಮವಾಗಿ ಮುಂದಿನ ಫೆಬ್ರವರಿಯಲ್ಲಿ ತಾಲೂಕು ಮಟ್ಟದಿಂದ ಆಯ್ಕೆಯಾದ ಸ್ಪರ್ಧಿಗಳನ್ನು ಒಳಗೊಂಡ ಜಿಲ್ಲಾಮಟ್ಟದ ಸ್ಪರ್ಧೆಯನ್ನು ಆಯೋಜಿಸಿ ಪ್ರಶಸ್ತಿ ಮತ್ತು ಬಹುಮಾನವನ್ನು ನೀಡಲಾಗುತ್ತದೆಂದು ತಿಳಿಸಿದರು.
ಸ್ಪರ್ಧೆಯ ಹೆಚ್ಚಿನ ಮಾಹಿತಿಗಾಗಿ ಲೋಕೇಶ್ ಸಾಗರ್, ಅಧ್ಯಕ್ಷರು , ಜಿಲ್ಲಾ ಕಸಾಪ ಮೊ.9980988123, ಸುಂದರ್, ನಿವೃತ್ತ ಉಪನ್ಯಾಸಕರು ಮೊ.9880038013, ಈಶ, ಉಪನ್ಯಾಸಕರು ಮೊ.9481063027, ಕೆ.ಸಿ. ನಂಜುಂಡಸ್ವಾಮಿ, ಜಿಲ್ಲಾ ನಿರ್ದೇಶಕರು ಮೊ.9448072929, ಎನ್.ಎ. ಅಶ್ವತ್ಥ್ ಕುಮಾರ್, ಮಾಧ್ಯಮ ಕಾರ್ಯದರ್ಶಿ ಮೊ.9448106135ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಉಪನ್ಯಾಸಕ ಸುಂದರ್, ಜಿಲ್ಲಾ ನಿರ್ದೇಶಕ ಕೆ.ಸಿ. ನಂಜುಂಡಸ್ವಾಮಿ ಹಾಗೂ ಮಾಧ್ಯಮ ಕಾರ್ಯದರ್ಶಿ ಎನ್.ಎ. ಅಶ್ವತ್ಥ್ ಕುಮಾರ್ ಉಪಸ್ಥಿತರಿದ್ದರು.