ಶನಿವಾರಸಂತೆ, ನ. 26: ಸ್ಥಳೀಯ ಗ್ರಾಮ ಪಂಚಾಯಿತಿ ಕಸ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಯುವ ಘಟಕ ಹಾಗೂ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ವತಿಯಿಂದ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಕಂದಾಯ ಇಲಾಖೆ ಅಧಿಕಾರಿ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪಕ್ಕದಲ್ಲೇ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಸಮೀಪದಲ್ಲೇ ಹರಿವ ಹೊಳೆಗೆ ತ್ಯಾಜ್ಯವೆಲ್ಲ ಸೇರುತ್ತಿದೆ. ಕಲುಷಿತ ನೀರು ಗದ್ದೆಗಳಿಗೂ ಹರಿಯುತ್ತಿದ್ದು, ದನ- ಕರುಗಳು ಅದೇ ನೀರನ್ನು ಕುಡಿದು ಸಾವನ್ನಪ್ಪುತ್ತಿವೆ. ರೋಗ - ರುಜಿನಗಳು ಹರಡಲು ಕಾರಣವಾಗುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.

ಸ್ಪಂದಿಸಿದ ಕಂದಾಯ ಅಧಿಕಾರಿ ಮಧುಸೂದನ್, ಜಿಲ್ಲಾಧಿಕಾರಿಯವರು ಈಗಾಗಲೇ ಶನಿವಾರಸಂತೆ ಗ್ರಾ.ಪಂ. ಕಸ ವಿಲೇವಾರಿಗೆ ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಮಾದ್ರೆ ಗ್ರಾಮದಲ್ಲಿ ಒಂದೂ ಮುಕ್ಕಾಲು ಎಕರೆ ಜಾಗವನ್ನು ಗುರುತಿಸಿದ್ದಾರೆ. ಶನಿವಾರಸಂತೆ ಗ್ರಾ.ಪಂ. ಕಸ ವಿಲೇವಾರಿಗೆ ನೀಡಲಾದ ಜಾಗವನ್ನು ಮಂಜೂರು ಮಾಡಿಸಿಕೊಳ್ಳಬೇಕು ಎಂದರು.

ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕುಶಾಲಪ್ಪ ಹಾಗೂ ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿ, ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ, ಇನ್ನು 15 ದಿನಗಳೊಳಗೆ ತ್ಯಾಜ್ಯ ವಿಲೇವಾರಿ ಸ್ಥಳದ ಮಂಜೂರಾತಿ ಬಗ್ಗೆ ವ್ಯವಹರಿಸಿ, ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭ ಕರವೇ ತಾಲೂಕು ಯುವ ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಹೋಬಳಿ ಅಧ್ಯಕ್ಷ ಆನಂದ್ ಉಪಾಧ್ಯಕ್ಷರಾದ ರಾಕೇಶ್, ಪ್ರವೀಣ್, ಕಾರ್ಯದರ್ಶಿ ದಿವಾಕರ್, ಸದಸ್ಯರು, ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ತಾಲೂಕು ಅಧ್ಯಕ್ಷ ಪಿ. ಮಧು, ಕಾರ್ಯದರ್ಶಿ ಸಂತೋಷ್, ಮಾಧ್ಯಮ ಕಾರ್ಯದರ್ಶಿ ಧರಣಿ, ಸದಸ್ಯರು ಹಾಜರಿದ್ದರು.