ಶನಿವಾರಸಂತೆ, ಸೆ. 1: ಮನೆಯೊಂದರ ಹಿಂಭಾಗದಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸುತ್ತಿರುವ ಬಗ್ಗೆ ಪೊಲೀಸರಿಗೆ ದೊರೆತ ಮಾಹಿತಿಯ ಮೇರೆಗೆ ಧಾಳಿ ನಡೆಸಿ ಪುಳಗಂಜಿ, ಸಾಮಗ್ರಿ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದೊಡ್ಡಕೊಡ್ಲಿ ಕಲ್ಲಾರೆ ಗ್ರಾಮದ ರಾಜೇಗೌಡರ ಮಗ ಎಂ.ಆರ್. ನಾಗೇಶ ಅವರನ್ನು ಪೊಲೀಸರು ವಶಕ್ಕೆ ಪಡೆದು, 10 ಲೀಟರ್‍ನಷ್ಟು ಪುಳಗಂಜಿಯನ್ನು ಚರಂಡಿಗೆ ಸುರಿದು ನಾಶಪಡಿಸಲಾಯಿತು. ತಯಾರಿಸಲು ಇಟ್ಟುಕೊಂಡಿದ್ದ ಪಾತ್ರೆಗಳು, ಪ್ಲಾಸ್ಟಿಕ್ ಬಿಂದಿಗೆಗಳನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ಕೊಡ್ಲಿಪೇಟೆಯ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿರುವದನ್ನು ಇಲ್ಲಿ ಸ್ಮರಿಸಬಹುದು. ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಎಸ್. ಪರಶಿವ ಮೂರ್ತಿ, ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿಗಳಾದ ಪ್ರದೀಪ್, ಸಂತೋಷ್, ವಿಶ್ವನಾಥ್, ಹರೀಶ್, ಪರಮೇಶ, ಬಿ.ಎನ್. ಸವಿತಾ, ಕೆ.ಸಿ. ಸವಿತಾ ಪಾಲ್ಗೊಂಡಿದ್ದರು.