ಚೆಟ್ಟಳ್ಳಿ, ಜು. 28: ಹಲವು ದೇವಾಲಯಗಳಲ್ಲಿ ದುಷ್ಕರ್ಮಿಗಳಿಂದ ಕಳವು ಹಾಗೂ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಚೆಟ್ಟಳ್ಳಿಯ ಪೊಲೀಸ್ ಉಪಠಾಣೆಯಲ್ಲಿ ಮುನ್ನೆಚ್ಚರಿಕಾ ಸಭೆ ನಡೆಯಿತು.

ಮಡಿಕೇರಿ ಗ್ರಾಮಾಂತರ ಠಾಣೆಯ ಆರಕ್ಷಕ ಸಹಾಯಕ ಉಪನಿರೀಕ್ಷಕ ಸೋಮಯ್ಯ ಅವರ ನೇತೃತ್ವದಲ್ಲಿ ಚೆಟ್ಟಳ್ಳಿ ವ್ಯಾಪ್ತಿಯ ಎಲ್ಲಾ ದೇವಾಲಯಗಳ ಆಡಳಿತ ಮಂಡಳಿಯವರು ಹಾಗೂ ಅರ್ಚಕರ ಸಭೆಯನ್ನು ನಡೆಸಲಾಯಿತು. ಸೋಮಯ್ಯ ಅವರು ಮಾತನಾಡಿ, ಊರಿನ ದೇವಾಲಯದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆಯೂ ಹಾಗೂ ಅನುಮಾನಾಸ್ಪದವಾಗಿ ಆಗಮಿಸುವ ಯಾವದೇ ವ್ಯಕ್ತಿಗಳ ಮೇಲೆ ನಿಗಾವಹಿಸುವಂತೆ ತಿಳಿಸಿದರು.

ಚೆಟ್ಟಳ್ಳಿ ಉಪಠಾಣಾಧಿಕಾರಿ ಬಿ.ಎಸ್ ಜಗನ್ನಾಥ್ ಅವರು ಮಾತನಾಡಿ, ಸಾಧ್ಯವಾದಲ್ಲಿ ದೇವಾಲಯಗಳಿಗೆ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿ ಕೊಳ್ಳುವದು ಹಾಗೂ ಸಮಯಕ್ಕೆ ಸರಿಯಾಗಿ ದೇವಾಲಯದ ಭಂಡಾರದ ಹಣವನ್ನು ಸಂಗ್ರಹಿಸಿಟ್ಟು ಕಳವು ಯತ್ನಗಳನ್ನು ವಿಫಲಗೊಳಿಸಬಹುದು. ಕಳ್ಳತನದ ಸುಳಿವು ಸಿಕ್ಕಿದಲ್ಲಿ ತಕ್ಷಣದಲ್ಲಿ ಮಾಹಿತಿಯನ್ನು ನೀಡಬೇಕೆಂದರು.

ಸಭೆಯಲ್ಲಿ ಸೋಮೆಯಂಡ ದಿಲೀಪ್ ಅಪ್ಪಚ್ಚು, ಪೊರಿಮಂಡ ದಿನಮಣಿ ಪೂವಯ್ಯ, ಸಿ.ಎ. ಆನಂದ ಹಾಗೂ ದೇವಾಲಯದ ಅರ್ಚಕರು, ಪೊಲೀಸ್ ಸಿಬ್ಬಂದಿಗಳಾದ ರಾಜೇಶ್, ಅನಿಲ್ ಉಪಸ್ಥಿತರಿದ್ದರು.