ವೀರಾಜಪೇಟೆ, ಸೆ. 26: ವೀರಾಜಪೇಟೆ ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ ಸಂಘಕ್ಕೆ ಸೇರಿದ ಕಟ್ಟಡದ ಮಳಿಗೆ ಬಾಡಿಗೆದಾರರಿಗೆ ಉದ್ದೇಶ ಪೂರಿತವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಕಟ್ಟಡದ ಬಾಡಿಗೆದಾರರು ಹಾಗೂ ವಕೀಲ ಪೂಳಂಡ ವಿನು ಪೆಮ್ಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ಸಂಘ 1962ರಲ್ಲಿ ಸ್ಥಾಪನೆಗೊಂಡು 54 ವರ್ಷ ಕಳೆದಿದೆ. 2008ರವರೆಗೆ ಉತ್ತಮ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುತಿತ್ತು. 2009ರಲ್ಲಿ ಹಳೆಯ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿಂದ ಈಚೆಗೆ ಮೀನ ಮೇಷದ ಕನ್ನಡ ರಾಜ್ಯೋತ್ಸವ ನಡೆಸಿ, ಕನ್ನಡ ಭಾಷೆಗೆ ಸಂಬಂಧಿಸಿದಂತೆ ಇತರ ಯಾವದೇ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ. ಕಳೆದ 9 ವರ್ಷಗಳಿಂದ ಸಂಘದಲ್ಲಿ ಮಹಾಸಭೆ, ಚುನಾವಣೆಗಳು ನಡೆದಿಲ್ಲ. ಇದನ್ನು ಪ್ರಶ್ನಿಸುವವರಿಗೆ ಕಚೇರಿಯ ಸಿಬ್ಬಂದಿ ಬೇಜವಾಬ್ದಾರಿಯ ಉತ್ತರ ನೀಡಿ ನುಣುಚಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
ಕರ್ನಾಟಕ ಸಂಘದ ಮತ್ತೋರ್ವ ಬಾಡಿಗೆದಾರರಾದ ಜಿ.ಸಚಿನ್ ಮಾತನಾಡಿ, ಕಟ್ಟಡದ ಕೆಳ ಅಂತಸ್ತಿನಲ್ಲಿ 19 ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ಬಾಡಿಗೆ ಒಪ್ಪಂದವನ್ನು ಕಾನೂನನ್ನು ಗಾಳಿಗೆ ತೂರಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಪ್ರಭಾವವನ್ನು ಬಳಸಿ ಕಾನೂನು ಬಾಹಿರವಾಗಿ ಬಾಡಿಗೆ ದರ ನಿಗದಿ ಮಾಡಿದ್ದಾರೆ. ಮುಂಗಡ ಹಣದಲ್ಲೂ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ. ಪ್ರತಿ ವರ್ಷ ಒಂದು ಕೋಣೆಗೆ 800ರಿಂದ 1000 ರೂ.ಗಳವರೆಗೆ ನಿಯಮ ಬಾಹಿರವಾಗಿ ಬಾಡಿಗೆ ಜಾಸ್ತಿ ಮಾಡುತ್ತಿದ್ದಾರೆ. ಕಾನೂನಿನ ರೀತಿಯಲ್ಲಿ ಸಂಘ ಸಂಸ್ಥೆಗಳಿಗೆ ಸೇರಿದ ಕಟ್ಟಡಕ್ಕೆ ಇಲಾಖೆ ಇಂತಿಷ್ಟು ಚದರಡಿಗೆ ಇಂತಿಷ್ಟು ಬಾಡಿಗೆ ಎಂದು ನಿಗದಿ ಮಾಡಿದೆಯಾದರೂ ಈ ಕರ್ನಾಟಕ ಸಂಘಕ್ಕೆ ಯಾವದೇ ಷರತ್ತು ನಿಬಂಧನೆಗಳಿಲ್ಲ. ಸರ್ವಾಧಿಕಾರವಾಗಿ ಮುಂದುವರೆಯುತ್ತಿದೆ ಎಂದಿದ್ದಾರೆ. ಬಾಡಿಗೆದಾರರಿಗೆ ನ್ಯಾಯ ಸಮ್ಮತವಾದ ಬಾಡಿಗೆ ನಿಗದಿ ಪಡಿಸಬೇಕು. ಈ ವಿಷಯದಲ್ಲಿ ಪ್ರಭಾವದ ಮೇರೆ ಬಾಡಿಗೆದಾರರ ನಡುವೆಯೇ ಮಲತಾಯಿ ಧೋರಣೆ ಅನುಸರಿಸ ಬಾರದು. ಈ ಸÀಂಬಂಧದಲ್ಲಿ, ಸಂಬಂಧ ಪಟ್ಟ ಇಲಾಖೆ ಹಾಗೂ ಕ್ಷೇತ್ರದ ಶಾಸಕರಿಗೆ ದೂರು ನೀಡಲಾಗುವದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಸದಸ್ಯರುಗಳಾದ ಜಿ.ಎಂ.ಪೊನ್ನಪ್ಪ, ಟಿ.ಶಂಕರಿ ಅಪ್ಪಯ್ಯ, ಕೆ.ಎ.ನಾಣಯ್ಯ, ಟಿ.ಸುರೇಶ್, ಸಿ.ಕೆ.ಸುಗುಣ ಮತ್ತಿತರರು ಹಾಜರಿದ್ದರು.