ಮಡಿಕೇರಿ, ಜು. 5: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು. ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡವ ಹಾಗೂ ಕೊಡವ ಭಾಷಿಕರ ಸಮಗ್ರ ದಾಖಲೀಕರಣ ಮಾಡುವ ಕುರಿತು ಮತ್ತು ಫೆಲೋಶಿಪ್ ಆಯ್ಕೆ ಕುರಿತು ಚರ್ಚಿಸಲಾಯಿತು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ನೂತನ ರಿಜಿಸ್ಟ್ರಾರ್ ಡಾ. ಕೋಡಿರ ಲೋಕೇಶ್ ಉಪಸ್ಥಿತರಿದ್ದರು. ಫೆಲೋಶಿಪ್‍ಗೆ ಪುಲಿಯಂಡ ಸುಜಾತ ಬೋಪಣ್ಣ, ಹರ್ಷ ಮಂದಣ್ಣ, ಕಂಬೆಯಂಡ ದೀನಾ, ಬಿದ್ದಂಡ ರೇಖಾ ಚಿಣ್ಣಪ್ಪ ಅವರುಗಳನ್ನು ಆಯ್ಕೆ ಮಾಡಲಾಯಿತು. ಅವರುಗಳಿಗೆ ಡಾ. ಕೋಡಿರ ಲೋಕೇಶ್ ಅವರು ಸಂಶೋಧನೆ ಕಾರ್ಯಸೂಚಿಗಳ ಕುರಿತು ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಕೊಡವ ಮತ್ತು ಕೊಡವ ಭಾಷಿಕರ ಸಮಗ್ರ ದಾಖಲೀಕರಣದ ಕುರಿತು ಚರ್ಚೆ ನಡೆದು ಕೊಡವ ಮತ್ತು ಕೊಡವ ಭಾಷಿಕರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಜನಪದ ಹಾಡುಗಳಾದ ಬಾಳೋಪಾಟ್ ನಲ್ಲಿರುವ ದೇವರಹಾಡು, ಬಟ್ಟೆಪಾಟ್, ಮನೆಪಾಟ್, ಪೊಲ್‍ಚಿಪಾಟ್, ಚಾವುಪಾಟ್, ಇನ್ನಿತರೆ ಹಾಡುಗಳ ಧ್ವನಿ ಮುದ್ರಣ ಹಾಗೂ ಅದರ ಭಾವಾರ್ಥಗಳನ್ನು ದಾಖಲೀಕರಣ ಮಾಡುವದರ ಮೂಲಕ ಕೊಡವ ಜನಪದವನ್ನು ಜೀವಂತವಾಗಿ ಇಡಬಹುದು ಎಂದು ಡಾ. ಕೋಡಿರ ಲೋಕೇಶ್ ಹೇಳಿದರು. ಇದರೊಂದಿಗೆ ಜನಾಂಗಿಯ ಅಧ್ಯಯನ, ಲಭ್ಯ ಇತಿಹಾಸಗಳ ದಾಖಲೀಕರಣ, ಶಾಸನಗಳ ರಕ್ಷಣೆ ಹಾಗೂ ತರ್ಜುಮೆ, ತಾಳೆಗರಿ ದಾಖಲೆಗಳ ಸಂಗ್ರಹ ಹಾಗೂ ಅವುಗಳ ತರ್ಜುಮೆ ಯೊಂದಿಗೆ ಮುಂದಿನ ಪೀಳಿಗೆಗೆ ಮಾಹಿತಿ ನೀಡುವ ಕೆಲಸವಾಗ ಬೇಕೆಂದು ಅಭಿಪ್ರಾಯಪಟ್ಟರು.

ಅಕಾಡೆಮಿ ಮಾಡಲು ಹೊರಟಿರುವ ಈ ದಾಖಲೀಕರಣ ಕಾರ್ಯಕ್ರಮಕ್ಕೆ ತಾವು ಮಾರ್ಗದರ್ಶನ ನೀಡಲು ಸದಾಸಿದ್ಧ ಎಂದು ಭರವಸೆ ನೀಡಿದರು. ಇದೇ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ನೂತನ ರಿಜಿಸ್ಟ್ರಾರ್ ಆಗಿ ಅಧಿಕಾರ ವಹಿಸಿಕೊಂಡ ಡಾ. ಕೋಡಿರ ಲೋಕೇಶ್ ಅವರನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸನ್ಮಾನಿಸಿ ಅಭಿನಂದಿಸ ಲಾಯಿತು.