ಶನಿವಾರಸಂತೆ, ಡಿ. 10: ಬೆಸೂರು ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸ ರೊಬ್ಬರಿಗೆ ತಾ.9ರಂದು ಮರಳು ತುಂಬಿದ ಟಿಪ್ಪರ್ (ಕೆಎ 14, ಎ-2304) ಮಾಲೀಕ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರಸಂತೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಹೆಚ್.ಕೆ. ವಿಶ್ವನಾಥ ಹಾಗೂ ಗೃಹ ರಕ್ಷಕ ಸಿಬ್ಬಂದಿ ಕುಮಾರ ಅವರನ್ನು ನಿಲುವಾಗಿಲು ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸಲು ನೇಮಿಸಲಾಗಿತ್ತು. ತಾ. 9ರಂದು ಕರ್ತವ್ಯ ನಿರ್ವಹಿಸುತ್ತಿದ್ದಾಗ, ನಿಲುವಾಗಿಲು ಕಡೆಯಿಂದ ಮಲ್ಲಿಪಟ್ಟಣ ಅರಕಲಗೋಡು ಕಡೆಗೆ ತೆರಳುತ್ತಿದ್ದಾಗ, ಟಿಪ್ಪರ್ನ್ನು ನಿಲ್ಲಿಸಿ ಪೊಲೀಸರು ಪರಿಶೀಲನೆ ಮಾಡಿದಾಗ ಟಿಪ್ಪರಿನಲ್ಲಿ ಮರಳು ತುಂಬಿಸಲಾಗಿದ್ದು, ದಾಖಲೆ ಪತ್ರ ಸರಿಯಿಲ್ಲದ ಕಾರಣ, ಮರಳು ಸಾಗಾಟದ ಪರವಾನಿಗೆಯನ್ನು ಸರಿಪಡಿಸಿಕೊಂಡು ಹೋಗುವಂತೆ ತಿಳಿಸಿದಾಗ ಸ್ಥಳಕ್ಕೆ ಬಂದ ಟಿಪ್ಪರ್ ಮಾಲೀಕ ರವಿ ತಾನು ಟಿಪ್ಪರನ್ನು ತೆಗೆದುಕೊಂಡು ಹೋಗುತ್ತೇನೆ. ಪೊಲೀಸರು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿ ಟಿಪ್ಪರ್ ಹತ್ತಲು ಹೋದಾಗ ಪೊಲೀಸ್ ಸಿಬ್ಬಂದಿ ವಿಶ್ವನಾಥ ತಡೆದಾಗ ಮಾಲೀಕ ರವಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಟಿಪ್ಪರನ್ನು ಸ್ಥಳದಿಂದ ತೆಗೆದುಕೊಂಡು ಪರಾರಿಯಾಗಿ ರುತ್ತಾನೆಂದು ವಿಶ್ವನಾಥ್ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದಾರೆ.