ಸೋಮವಾರಪೇಟೆ, ಸೆ. 20: ಕಳೆದ ಕೆಲ ದಿನಗಳ ಹಿಂದೆ ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದ ಕರುವಿನ ಕಳೇಬರಕ್ಕೆ ಗ್ರಾಮದ ಯುವಕರೇ ಮುಕ್ತಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕಳೆದ 10 ದಿನಗಳ ಹಿಂದೆ ನಗರದಿಂದ ಕಿಬ್ಬೆಟ್ಟ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಅವಘಡ ಸಂಭವಿಸಿ, ಗಾಯಾಳು ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದರೆ, ಗಾಯಗೊಂಡಿದ್ದ ಕರು ಕೆಲ ದಿನಗಳ ಹಿಂದಷ್ಟೇ ರಸ್ತೆ ಬದಿಯಲ್ಲಿ ಸಾವನ್ನಪ್ಪಿತ್ತು.
ಕರುವಿನ ಮಾಲೀಕರು ಇತ್ತ ಸುಳಿಯದೇ ಇದ್ದುದರಿಂದ ರಸ್ತೆಯ ಬದಿಯಲ್ಲಿಯೇ ಇದ್ದ ಕಳೇಬರ ದುರ್ವಾಸನೆ ಬೀರಲಾರಂಭಿಸಿತು. ಈ ಹಿನ್ನೆಲೆ ಕಿಬ್ಬೆಟ್ಟ ಗ್ರಾಮದ ರವಿ, ಭವನ್, ಅಭಿ, ನಾಗರಾಜ್, ಪ್ರಕಾಶ್ ಸೇರಿದಂತೆ ಇತರ ಯುವಕರು ಕರುವಿನ ಕಳೇಬರವನ್ನು ಸ್ಥಳಾಂತರಿಸಿ ಗುಂಡಿಯಲ್ಲಿ ಮುಚ್ಚಿದರು.