ಮಡಿಕೇರಿ, ಸೆ.27 : ಐಸಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಕರಗ ಮಹೋತ್ಸವಕ್ಕೆ ಅ.2 ರಂದು ಚಾಲನೆ ದೊರೆಯಲಿದೆ. ನಾಲ್ಕು ಶಕ್ತಿ ದೇವತೆಗಳ ದೇವಾಲಯ ಸಮಿತಿಗಳು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಪ್ರಧಾನ ಕಾರ್ಯದರ್ಶಿ ಜಿ.ಸಿ.ರಮೇಶ್ ಕರಗೋತ್ಸವದ ಕುರಿತು ಮಾಹಿತಿ ನೀಡಿದರು. ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಾಲಯಗಳ ಮುಖ್ಯ ಅರ್ಚಕರು, ಕುಲ ಬಾಂಧವರು ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಅಧ್ಯಕ್ಷ ಜಿ.ಜಿ. ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆಯನ್ನು ನಡೆಸಿ ವಿಜೃಂಭಣೆಯ ಕರಗ ಮಹೋತ್ಸವವನ್ನು ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು ಎಂದರು. ಅ.2 ರಂದು ಮಧ್ಯಾಹ್ನ 2 ಗಂಟೆಗೆ ಕರಗಗಳನ್ನು ಸಿಂಗರಿಸಲು ನಾಲ್ಕು ಶಕ್ತಿ ದೇವತೆಗಳ ದೇವಾಲಯದಿಂದ ಸಾಂಪ್ರದಾಯಿಕ ಆಚರಣೆÉಯೊಂದಿಗೆ ಪಂಪಿನ ಕೆರೆಗೆ ತೆರಳಲಾಗುವದು. ವಿಶೇಷ ಪೂಜೆ ವಿಧಿ - ವಿಧಾನಗಳೊಂದಿಗೆ ಪುಷ್ಪಾಲಂಕಾರವನ್ನು ಮಾಡಿ ನಗರ ಸಂಚಾರಕ್ಕೆ ಚಾಲನೆ ನೀಡಲಾಗುವದು. ಸಂಜೆ 6 ಗಂಟೆಗೆ ಮಹದೇವಪೇಟೆಯ ಮುಖ್ಯ ಬೀದಿಯಲ್ಲಿ ಭಕ್ತಾದಿಗಳಿಂದ ಪೂಜೆಯನ್ನು ಸ್ವೀಕರಿಸಿ ಐತಿಹಾಸಿಕ ಪೇಟೆ ಶ್ರೀರಾಮಮಂದಿರ ದೇಗುಲಕ್ಕೆ ನಾಲ್ಕು ಶಕ್ತಿ ದೇವತೆಗಳ ಕರಗಗಳು ಒಟ್ಟಿಗೆ ಸೇರಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುವದು. ನಂತರ ಆಯಾ ದೇವಾಲಯಗಳಿಗೆ ಮರಳಲಾಗುವದೆಂದು ಜಿ.ಸಿ. ರಮೇಶ್ ಮಾಹಿತಿ ನೀಡಿದರು.
ನಂತರದ ನವರಾತ್ರಿ ದಿನಗಳಲ್ಲಿ ನಗರ ಸಂಚಾರ ಮಾಡುವ ಕರಗಗಳು ವಿವಿಧ ಬಡಾವಣೆÉಗಳಲ್ಲಿ ಭಕ್ತರಿಂದ ಪೂಜೆಯನ್ನು ಸ್ವೀಕರಿಸಲಿವೆ. ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕರಗೋತ್ಸವಕ್ಕೆ ಮಡಿಕೇರಿ ದಸರಾ ಸಮಿತಿ, ದಶ ಮಂಟಪ ಸಮಿತಿ, ಎಲ್ಲಾ ದೇವಾಲಯ ಸಮಿತಿ ಹಾಗೂ ಜಿಲ್ಲಾಡಳಿತ ಅಗತ್ಯ ಸಹಕಾರವನ್ನು ನೀಡಬೇಕೆಂದು ಜಿ.ಸಿ. ರಮೇಶ್ ಇದೇ ಸಂದರ್ಭ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರುಗಳಾದ ರಘು, ಅನೀಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಗಣೇಶ್ ಹಾಗೂ ಖಜಾಂಚಿ ಪಿ.ಸಿ. ಕೃಷ್ಣ ಉಪಸ್ಥಿತರಿದ್ದರು.